ಮುಂಬೈ: ಕೇವಲ ಬೆರಳೇಣಿಕೆಯಷ್ಟಿದ್ದ ಕ್ರಿಕೆಟ್ ಆಡುವ ದೇಶಗಳ ಸಂಖ್ಯೆ ನೂರರ ಗಡಿ ದಾಟಿದೆ. ಇನ್ನು ಭಾರತದಲ್ಲಿ ಕ್ರಿಕೆಟ್ ಆಟವನ್ನು, ಕ್ರಿಕೆಟಿಗರನ್ನು ಆರಾಧಿಸುವಷ್ಟರ ಮಟ್ಟಿಗೆ ಕ್ರಿಕೆಟ್ ಬೆಳೆದಿದೆ. ಒಂದು ವರ್ಷದ ಮಕ್ಕಳಿಂದ ಹಿಡಿದು ಶತಕ ದಾಟಿದವರೂ ಕೂಡ ಕ್ರಿಕೆಟ್ಗೆ ಮಾರುಹೋಗಿದ್ದಾರೆ ಎನ್ನುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಶೇರ್ ಮಾಡಿಕೊಂಡಿರುವ ಒಂದು ವಿಡಿಯೋ ಸಾಕ್ಷಿಯಾಗಿದೆ.
ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ವಿಡಿಯೋ.... ಅಮ್ಮ-ಮಗನ ಕ್ರಿಕೆಟ್ಗೆ ಕೈಫ್ ಕೂಡ ಫಿದಾ - ಗಲ್ಲಿ ಕ್ರಿಕೆಟ್
ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದ ಅಮ್ಮ ಮಗ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಜನಸಂದಣಿಯ ಮಧ್ಯೆ ತಾಯಿಯೊಬ್ಬಳು ತನ್ನ ಪುಟ್ಟ ಮಗನಿಗೆ ಬೌಲಿಂಗ್ ಮಾಡುತ್ತಿರುವುದು, ಆ ಮಗು ಪ್ಲಾಸ್ಟಿಕ್ ಬ್ಯಾಟಿನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಇದೀಗ ದೇಶದೆಲ್ಲೆಡೆ ಸದ್ದು ಮಾಡುವಂತೆ ಮಾಡಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ತಾಯಿ ಮಗನ ಕ್ರಿಕೆಟ್ ಆಟವನ್ನು ಮೆಚ್ಚಿದ್ದು, ತಮ್ಮ ಟ್ವಿಟರ್ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ."ಮದರ್ ಬೌಲಿಂಗ್,ಚೈಲ್ಡ್ ಬ್ಯಾಟಿಂಗ್.. ಜಸ್ಟ್ ಒನ್ ವರ್ಡ್- ಬ್ಯೂಟಿಫುಲ್"ಎಂದು ಬರೆದುಕೊಂಡಿದ್ದಾರೆ.
ಕೈಫ್ ಅಭಿಮಾನಿಗಳು ಸಹಾ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಯಾವೊಬ್ಬ ಕ್ರಿಕೆಟಿಗನೂ ಗಲ್ಲಿ ಕ್ರಿಕೆಟ್ ಆಡದೇ ಬಂದಿರುವುದಿಲ್ಲ, ಈ ವಿಡಿಯೋ ಅದ್ಭುತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಬಾಲ್ಯದಲ್ಲಿ ಅಪ್ಪ, ಅಮ್ಮ, ತಾತನ ಜೊತೆ ಕ್ರಿಕೆಟ್ ಆಡಿದ ಸವಿನೆನೆಪನ್ನು ಮೆಲುಕು ಹಾಕಿದ್ದಾರೆ.