ಕೊಚ್ಚಿ:7 ವರ್ಷಗಳ ನಿಷೇಧದ ಅವಧಿಯನ್ನು ಪೂರೈಸಿ ಸಂಪೂರ್ಣ ಸ್ವತಂತ್ರ ಹಕ್ಕಿಯಾಗಿರುವ ಕೇರಳದ ಬೌಲರ್ ಎಸ್. ಶ್ರೀಶಾಂತ್ ಪಾಲಿಗೆ ಕೇರಳ ತಂಡದ ಬಾಗಿಲು ತೆರೆದಿರುತ್ತದೆ. ಆದರೆ, ಅವರು ಕಠಿಣ ತರಬೇತಿ ಪಡೆದು ಸ್ಥಿರತೆ ಕಂಡುಕೊಳ್ಳುವುದರ ಜೊತೆಗೆ ಫಿಟ್ನೆಸ್ ಸಾಬೀತುಪಡಿಸಬೇಕು ಎಂದು ಕೇರಳ ತಂಡದ ಕೋಚ್ ಟಿನು ಯೋಹನ್ನನ್ ತಿಳಿಸಿದ್ದಾರೆ.
2013ರ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಲುಕಿದ್ದ ಶ್ರೀಶಾಂತ್ ಹಾಗೂ ಇತರೆ ಇಬ್ಬರು ಆಟಗಾರರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ, ಬಿಸಿಸಿಐನ ಒಂಬುಡ್ಸನ್ ಡಿಕೆ ಜೈನ್ ಅವರು ಕಳೆದ ವರ್ಷ ಆಗಸ್ಟ್ನಲ್ಲಿ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿದ್ದರು. ಸೆಪ್ಟೆಂಬರ್ 13ರಂದು ಶ್ರೀಶಾಂತ್ರ ನಿಷೇಧದ ಅವಧಿ ಮುಗಿದಿದ್ದು, ಇದೀಗ ಕೇರಳ ತಂಡದ ಪರ ಮತ್ತೆ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ್ದರು. ಅದಕ್ಕೆ ಕೋಚ್ ಕೂಡ ಕೇರಳ ತಂಡದ ಬಾಗಿಲು ಶ್ರೀ ಪಾಲಿಗೆ ಸದಾ ತೆರೆದಿದೆ ಎಂದಿದ್ದಾರೆ.