ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡು ನಿರಾಶೆ ಅನುಭಿವಿಸಿದೆ. ಆದರೆ ಆರ್ಸಿಬಿ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಈ ಪಂದ್ಯದಲ್ಲಿ ಮುಂಬೈ ಗೆಲುವಿಗೆ ಅರ್ಹವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರು ತಂಡ ನೀಡಿದ 165 ರನ್ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು ತಲುಪಿ ಪ್ಲೇಆಫ್ ತಲುಪಿತ್ತು.
ಈ ಪಂದ್ಯದ ನಂತರ ಮಾತನಾಡಿದ ಕ್ಯಾಟಿಚ್, " ಮುಂಬೈ ತಂಡ ಪವರ್ಫುಲ್ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಆ ತಂಡಕ್ಕೆ ಬೌಲಿಂಗ್ನಲ್ಲಿ ಕಟ್ಟಿಹಾಕುವುದು ಕಷ್ಟವಾಗಿತ್ತು. ಏಕೆಂದರೆ ನಾವು ದೊಡ್ಡ ಸ್ಕೋರ್ಗಳಿಸಿರಲಿಲ್ಲ. ಆದೆ ಸರಿಯಾದ ಸಮಯದಲ್ಲಿ ವಿಕೆಟ್ ಪಡೆದಿದ್ದರೆ ಅವರನ್ನು ಕಟ್ಟಿಹಾಕಬಹುದಿತ್ತು. ಒಂದು ಸಮಯದಲ್ಲಿ 70ಕ್ಕೆ 3 ವಿಕೆಟ್ ಇದ್ದಿದ್ದರಿಂದ ನಾವು ಮೇಲುಗೈ ಸಾಧಿಸಿದೆವು ಎಂದು ಭಾವಿಸಿದ್ದೆ, ಆದರೆ ಸೂರ್ಯಕುಮಾರ್ ಅದ್ಭುತವಾಗಿ ಆಡಿದರು. 3ನೇ ವಿಕೆಟ್ ಕಳೆದುಕೊಂಡ ನಂತರವೂ ಅವರು ರನ್ ವೇಗವನ್ನು ಮುಂದುವರಿಸಿದರು. ಮರಳಿ ವಿಕೆಟ್ ಪಡೆದವಾದರೂ ಅಷ್ಟರಲ್ಲಿ ಪಂದ್ಯ ಕೈಮೀರಿ ಹೋಗಿತ್ತೆಂದು " ಅವರು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ನಿಜಕ್ಕೂ ಮುಂಬೈ ತಂಡ ಗೆಲುವಿಗೆ ಅರ್ಹವಾಗಿತ್ತು. ನಾವು ನಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಿಸಿಕೊಳ್ಳಲು ವಿಫಲರಾದೆವು. 3 ವಿಕೆಟ್ ಪಡೆದ ನಂತರವೂ ರನ್ ಬಿಟ್ಟುಕೊಟ್ಟೆವು. ಇಲ್ಲಿ ನಾವು ಸೋತೆವು ಎನ್ನುವುದಕ್ಕಿಂದ ಮುಂಬೈ ಅದ್ಭುತವಾಗಿ ಆಡಿತೆಂಬುದು ಪ್ರಮುಖ ವಿಚಾರ. ಆದರೆ ಮುಂದಿನ ಪಂದ್ಯಗಳಲ್ಲಿ ತಿರುಗಿ ಬೀಳುವ ವಿಶ್ವಾಸವಿದೆ ಎಂದು ಕ್ಯಾಟಿಚ್ ಹೇಳಿದ್ದಾರೆ.