ಜೋಹನ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 150 ರನ್ ಗಳಿಸಿ ತನ್ನ ಪ್ರಮುಖ 4 ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿದ್ದ ಲಂಕಾ ಪಡೆಗೆ ನಾಯಕ ಕರುಣರತ್ನೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಆಸರೆಯಾಗಿದ್ದಾರೆ.
ಭಾನುವಾರ ಶ್ರೀಲಂಕಾ ತಂಡ 157 ರನ್ಗಳಿಗೆ ಆಲೌಟಾದರೆ, ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ಇಂದು ಸೋಮವಾರ ಆ ಮೊತ್ತವನ್ನು 302ಕ್ಕೇರಿಸಿಕೊಂಡು ಆಲೌಟ್ ಆಗುವ ಮೂಲಕ 145 ರನ್ಗಳ ಮುನ್ನಡೆ ಪಡೆದಿತ್ತು. ಡೀನ್ ಎಲ್ಗರ್ ಶತಕ(127) ಸಿಡಿಸಿದರೆ, ಡಾಸ್ಸೆನ್ 67 ರನ್ ಗಳಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ವಿಫಲರಾದ ಕಾರಣ 302 ರನ್ಗಳಿಗೆ ಆಲೌಟ್ ಆಗಬೇಕಾಯಿತು.
ಲಂಕಾ ಪರ ವಿಶ್ವ ಫರ್ನಾಂಡೊ 5 ವಿಕೆಟ್, ಅಸಿತಾ ಫರ್ನಾಂಡೊ ಹಾಗೂ ಶನಾಕ ತಲಾ 2 ಹಾಗೂ ಚಮೀರ ಒಂದು ವಿಕೆಟ್ ಪಡೆದಿದ್ದರು.
ಇನ್ನು 145 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಕೇವಲ 1 ರನ್ ಆಗುವಷ್ಟರಲ್ಲಿ ಕುಸಾಲ್ ಪೆರೆರಾ ವಿಕೆಟ್ ಕಳೆದುಕೊಂಡು ಆಘಾತ ಅನುಭಿವಿಸಿತು. ಆದರೆ ತಿರುಮನ್ನೆ (31) ಜೊತೆ ಸೇರಿದ ನಾಯಕ ಕರುಣರತ್ನೆ 2ನೇ ವಿಕೆಟ್ಗೆ 85ರನ್ ಸೇರಿಸಿ ಚೇತರಿಕೆ ನೀಡಿದರು.
ತಿರುಮನ್ನೆ 31 ರನ್ ಗಳಿಸಿ ಔಟಾದರು. ನಂತರದ ಎಸೆತದಲ್ಲೇ ಕುಸಾಲ್ ಮೆಂಡಿಸ್ ತಾವೆದುರಿಸಿದ ಮೊದಲ ಎಸೆತದಲ್ಲೇ ಡಿಕಾಕ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಈ ಮೂರು ವಿಕೆಟ್ಗಳು ಲುಂಗಿ ಎಂಗಿಡಿ ಪಾಲಾದವು. ನಂತರ ಬಂದ ಮಿನೋದ್ ಭಾನುಕ ಕೇವಲ 1 ರನ್ ಗಳಿಸಿ ಎನ್ರಿಚ್ ನೋಕಿಯಾಗೆ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಕರುಣರತ್ನೆ 116 ಎಸೆತಗಳಲ್ಲಿ 17 ಬೌಂಡರಿ ಸೇರಿದಂತೆ 91 ರನ್ ಸಿಡಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಇವರಿಗೆ ಜೊತೆಯಾಗಿರುವ ಡಿಕ್ವೆಲ್ಲಾ 18 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. 2ನೇ ದಿನದಂತ್ಯಕ್ಕೆ ಶ್ರೀಲಂಕಾ ತಂಡ 39 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿದೆ.