ಬೆಂಗಳೂರು:ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಕೇವಲ ಒಂದು ರನ್ನಿಂದ ತಮ್ಮ 2ನೇ ಟಿ20 ಶತಕ ತಪ್ಪಿಸಿಕೊಂಡರು.
ಟೂರ್ನಿಯ 3ನೇ ಪಂದ್ಯವನ್ನಾಡುತ್ತಿರುವ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿದೆ. ಎಲ್ಲಾ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ತೋರಿ ವಿಕೆಟ್ ಒಪ್ಪಿಸಿದರೆ ಪಡಿಕ್ಕಲ್ ಮಾತ್ರ ಕೊನೆಯ ಓವರ್ವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಅವರು 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 99 ರನ್ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ರೋಹನ್ ಕದಂ 31 ರನ್ ಗಳಿಸಿದರು.
ದೇವದತ್ ಪಡಿಕ್ಕಲ್ ಕಳೆದ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಂಧ್ರ ಪ್ರದೇಶದ ವಿರುದ್ಧ 60 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದ್ದರು. ಈ ವೇಳೆ ಅವರು 13 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದ್ದರು. ಮೊದಲೆರಡು ಪಂದ್ಯಗಳಲ್ಲಿ ಕೇವಲ 17, 19 ರನ್ಗಳಿಗೆ ಔಟ್ ಆಗಿದ್ದ ಅವರು ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ತಂದಿದೆ.