ಬೆಂಗಳೂರು:ತಮಿಳುನಾಡು ಮತ್ತು ಕರ್ನಾಟಕ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ವಿಜೆಡಿ ನಿಯಮದ ಪ್ರಕಾರ ಕರ್ನಾಟಕ 60 ರನ್ಗಳ ಜಯ ದಾಖಲಿಸಿದೆ.
ತಮಿಳುನಾಡು ನೀಡಿದ 253 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಕೇವಲ 11 ರನ್ಗಳಿಸಿ ಔಟ್ ಆದ್ರು. 2ನೇ ವಿಕೆಟ್ಗೆ ಜೊತೆಯಾದ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ತಮಿಳುನಾಡು ಬೌಲರ್ಗಳ ಮೇಲೆ ಸವಾರಿ ಮಾಡಿದ ಇಬ್ಬರು ಆಟಗಾರರು ಅರ್ಧಶತಕ ಸಿಡಿಸಿದ್ರು.
23 ಓವರ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು 146 ರನ್ಗಳಿಸಿರುವಾಗ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಈ ವೇಳೆ, ವಿಜೆಡಿ ನಿಯಮದ ಪ್ರಕಾರ ಕರ್ನಾಟಕ 60 ರನ್ಗಳಿಂದ ಜಯ ದಾಖಲಿಸಿದ್ದು, ಕರ್ನಾಟಕ ವಿಜಯಿ ತಂಡ ಎಂದು ಘೋಷಣೆ ಮಾಡಲಾಯಿತು. ಈ ಮೂಲಕ 2019-20ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಮುತ್ತಿಕ್ಕಿದೆ. ಇಲ್ಲಿಯವರಗೆ ಕರ್ನಾಟಕ ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಂತಾಗಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ತಮಿಳುನಾಡು ತಂಡ 49.5 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 252ರನ್ ಗಳಿಸಿತ್ತು ತಮಿಳುನಾಡು ಪರ ಅಭಿನವ್ ಮುಕುಂದ್ 85, ಬಾಬಾ ಅಪರಜಿತ್ 66, ವಿಜಯ್ ಶಂಕರ್ 38 ರನ್ಗಳಿದ್ರು. ಕರ್ನಾಟಕ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸೇರಿದಂತೆ 5 ವಿಕೆಟ್ ಪಡೆದ್ರೆ, ವಿ.ಕೌಶಿಕ್ 2, ಗೌತಮ್ 1 ಮತ್ತು ಪ್ರತೀಕ್ ಜೈನ್ 1, ವಿಕೆಟ್ ಪಡೆದಿದ್ದಾರೆ.
ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ಕನ್ನಡಿಗರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.