ಹೈದರಾಬಾದ್ : ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ಕರ್ನಾಟಕ ತಂಡ ಈ ಬಾರಿಯ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ತಂಡ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದು, ಪ್ರಶಸ್ತಿ ಉಳಿಸಿಕೊಳ್ಳುವಲ್ಲಿಯೂ ವಿಫಲವಾಗಿತ್ತು.
ಈ ಎಲ್ಲಾ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಈ ಬಾರಿ ವಿಜಯ ಹಜಾರೆ ಟ್ರೋಫಿಯನ್ನಾದರೂ ಗೆಲ್ಲುವ ಉದ್ದೇಶದಿಂದ ಕೆಎಸ್‌ಸಿಎ 22 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ.
ಫೆಬ್ರವರಿ 18ರಂದು ಏಕದಿನ ಕ್ರಿಕೆಟ್ ಟೂರ್ನಿ ವಿಜಯ ಹಜಾರೆ ಟ್ರೋಫಿ ಆರಂಭವಾಗಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯ ನಾಯಕನಾಗಿದ್ದ ಕರುಣ್ ನಾಯರ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಅನುಭವಿ ಬ್ಯಾಟ್ಸ್‌ಮನ್ ಆರ್.ಸಮರ್ಥ್‌ಗೆ ನಾಯಕನ ಹೊಣೆ ನೀಡಲಾಗಿದೆ.
ಏಕದಿನ ಕ್ರಿಕೆಟ್ ಟೂರ್ನಿ ವಿಜಯ ಹಜಾರೆ ಟ್ರೋಫಿಯಿಂದ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅವರನ್ನು ಹೊರಗಿಡಲಾಗಿದೆ. ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡಿದ್ದರು. ರಾಹುಲ್ ಅಂಗೈ ಮಣಿಕಟ್ಟಿನ ಗಾಯಕ್ಕೆ ತುತ್ತಾದರೆ, ಮನೀಶ್ ಟೆನಿಸ್ ಎಲ್ಬೊ ಗಾಯದ ಸಮಸ್ಯೆ ಎದುರಿಸಿದ್ದರು.
ಕಳೆದ ಬಾರಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧ ಗೆದ್ದು ನಾಲ್ಕನೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.