ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿದ 21ನೇ ವರ್ಷಾಚರಣೆಯ ಪ್ರಯುಕ್ತ ಭಾರತ ತಂಡದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಮತ್ತು ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತೀಯ ಕ್ರೀಡಾಪಟುಗಳು ಭಾನುವಾರ ಸೈನಿಕರಿಗೆ ಗೌರವ ಸಮರ್ಪಿಸಿದ್ದಾರೆ.
ಜುಲೈ 26 1999ರಲ್ಲಿ ಭಾರತೀಯ ಸಶಸ್ತ್ರ ಪಡೆ ಕಾರ್ಗಿಲ್ನಲ್ಲಿ ಪಾಕಿಸ್ತಾನ ಸೈನ್ಯವನ್ನು ಬಗ್ಗುಬಡಿದಿತ್ತು. ಅಂದಿನಿಂದ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತಾ ಬಂದಿದೆ. ಭಾರತೀಯ ಕ್ರೀಡಾಪಟುಗಳಾದ ಸಚಿನ್, ವಿರಾಟ್ ಕೊಹ್ಲಿ, ಗಗನ್ ನಾರಂಗ್ ಸೇರಿದಂತೆ ಹಲವಾರು ಮಂದಿ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಭಾರತೀಯ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ," ನಮ್ಮನ್ನೆಲ್ಲಾ ಸುರಕ್ಷಿತವಾಗಿಡಲು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರ ಶೌರ್ಯ ಮತ್ತು ದೈರ್ಯಶಾಲಿ ಹೃದಯಕ್ಕೆ ನನ್ನ ನಮಸ್ಕಾರ. ಜೈ ಹಿಂದ್" ಎಂದು ಟ್ವೀಟ್ ಮೂಲಕ ಸೈನಿಕರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
ಭಾರತ ಕ್ರಿಕೆಟ್ನ ಲೆಜೆಂಡ್ ಸಚಿನ್ ತಂಡೂಲ್ಕರ್, "ಕಾರ್ಗಿಲ್ ಯುದ್ಧದ ಸಮಯದಲ್ಲಿ ನಮ್ಮ ರಕ್ಷಣಾ ಪಡೆಗಳ ಶೌರ್ಯ ಮತ್ತು ನಿಸ್ವಾರ್ಥ ತ್ಯಾಗದ ಅಸಂಖ್ಯಾತ ಕಥೆಗಳು ವಿಸ್ಮಯಕಾರಿ ಮತ್ತು ಸ್ಪೂರ್ತಿದಾಯಕ. ನಮ್ಮ ರಾಷ್ಟ್ರಕ್ಕೆ ಅವರು ಮಾಡಿದ ಸೇವೆಗೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ" ಎಂದು ಬರೆದುಕೊಂಡಿದ್ದಾರೆ.