ನವದೆಹಲಿ: ವಾರದ ಹಿಂದೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೊರೊನಾ ಲಾಕ್ಡೌನ್ ವೇಳೆ ಕೇಶ ಮುಂಡನ ಮಾಡಿಕೊಂಡು ಗಡ್ಡಬಿಟ್ಟುಕೊಂಡು ಹೊಸ ಲುಕ್ನಲ್ಲಿ ಕಂಗೊಳಿಸಿದ್ದರು. ಇವರನ್ನು ಅಭಿಮಾನಿಗಳು ವಿಂಡೀಸ್ ಲೆಜೆಂಡ್ ವಿವಿ ರಿಚರ್ಡ್ಸ್ಗೆ ಹೋಲಿಕೆ ಮಾಡಿದ್ದರು ಇದೀಗ ಅವರ ಹೊಸ ಲುಕ್ಗೆ ಪ್ರೇರಣೆಯಾದ ಇಬ್ಬರು ಲೆಜೆಂಡ್ಗಳ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
ನಾನು ಸರ್ ವಿವಿಯನ್ ರಿಚರ್ಡ್ಸ್ ಅವರ ಇನ್ಸ್ಟಾಗ್ರಾಮ್ಅನ್ನು ನೋಡಿದ್ದೇನೆ. ಅವರು ನನ್ನ ಹೀರೋ, ಹೀಗಾಗಿ ನಾನು ಅವರ ಸ್ಟೈಲ್ ಏಕೆ ಅನುಕರಣೆ ಮಾಡುಬಾರದೆಂದು ಆಲೋಚಿಸಿದೆ. ನಂತರ ನನ್ನ ಹೀರೋ ಸ್ಟೈಲ್ ಫಾಲೋ ಮಾಡಿದೆ. ಇನ್ನು ಧೋನಿಯನ್ನು ಸಹಾ ನಾನು ನೋಡಿದ್ದೇನೆ, ಅವರೂ ಕೂಡ ನನ್ನ ಹೀರೋ ಮತ್ತು ಅವರು ವಿಶ್ವಕಪ್ ಗೆದ್ದಬಳಿಕ ಇದೇ ರೀತಿ ಸ್ಟೈಲ್ನಲ್ಲಿದ್ದರು. ಹೀಗಾಗಿ ನಾನು ಈ ಬಾರಿ ಆ ಚಾನ್ಸ್ ತೆಗೆದುಕೊಂಡು, ಈ ರೀತಿ ಮಾಡಿಸಿಕೊಂಡಿದ್ದೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.