ಹೈದರಾಬಾದ್:ಭಾರತೀಯ ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ಆಲ್ರೌಂಡರ್, ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು, ಹೃದಯಾಘಾತದಿಂದ ಗುರುವಾರ ಇಹ ಲೋಕ ತ್ಯಜಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ಕಾಮೆಂಟೇಟರ್ ಡೀನ್ ಜೋನ್ಸ್ ಅವರೊಂದಿಗಿನ ಸುದೀರ್ಘ 35 ವರ್ಷಗಳ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.
ಪ್ರೊಫೆಸರ್ ಡೀನೊ ಎಂದೇ ಖ್ಯಾತಿ ಪಡೆದಿದ್ದ ಜೋನ್ಸ್ ಅವರ ಅಕಾಲಿಕ ನಿಧನ ಕೇಳಿ ನನಗೆ ಆಘಾತವಾಯಿತು. ಅವರು ನನ್ನ ಆತ್ಮೀಯ ಸ್ನೇಹಿತರ ಬಳಗದಲ್ಲಿ ಒಬ್ಬರಾಗಿದ್ದರು. ಡೀನೊ ಸಾವು ಅವರ ಕುಟುಂಬಕ್ಕೆ ಬಹಳ ನಷ್ಟ ತಂದಿಟ್ಟಿದೆ. ಅವರ ಸ್ವಭಾವವನ್ನು ನಾನು 35 ವರ್ಷದಿಂದ ಬಲ್ಲೆ. ಅದ್ಭುತ ವ್ಯಕ್ತಿ, ನನ್ನ ಜೊತೆ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದರು. 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜೋನ್ಸ್ ವಿರುದ್ಧ ನಾನು ಮೊದಲು ಬಾರಿಗೆ ಆಡಿದ್ದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಅವರೊಂದಿಗಿನ ಒಡನಾಟವನ್ನು ಕಪಿಲ್ ದೇವ್ ಸ್ಮರಿಸಿಕೊಂಡಿದ್ದಾರೆ.
ಡೀನ್ ಜೋನ್ಸ್ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ನಿವೃತ್ತಿ ಬಳಿಕ ಉತ್ತಮ ನಿರೂಪಣೆಯನ್ನು ಮಾಡುತ್ತಿದ್ದ ಅವರು ಅದ್ಭುತ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಭಾರತದ ದೇಶದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರಿಂದ ನಮ್ಮ ಅವರ ಭೇಟಿ ಸಾಮಾನ್ಯವಾಗಿತ್ತು. ಬೇರೆ ಯಾವುದೇ ವಿದೇಶಿ ಕ್ರಿಕೆಟಿಗ ಡೀನ್ ಅವರಿಗಿಂತ ಹೆಚ್ಚು ಬಾರಿ ಭಾರತಕ್ಕೆ ಭೇಟಿ ನೀಡಿಲ್ಲ. ಅವರು 100ಕ್ಕೂ ಹೆಚ್ಚು ಬಾರಿ ಭಾರತಕ್ಕೆ ಭೇಟಿ ನೀಡಿರಬಹುದು. ಆದರೆ, ಈಗ ಅವರ ನಿಧನ ಸುದ್ದಿ ಬಹಳ ಬೇಸರ ತಂದಿದೆ. ಅವರಿಗೆ 60 ವರ್ಷ ಕೂಡ ಆಗಿರಲಿಲ್ಲ ಎಂದು ತಾವು ಅವರೊಂದಿಗೆ ಆಡಿದ ಆಟದ ಬಗ್ಗೆ ಮೆಲುಕು ಹಾಕಿದ್ದಾರೆ.
ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಉತ್ತಮ ಕೋಚ್ ಮತ್ತು ಕಾಮೆಂಟೇಟರ್ ಆಗಿದ್ದ ಜೋನ್ಸ್, ಆಸ್ಟ್ರೇಲಿಯಾ ತಂಡದ ಪರ 52 ಟೆಸ್ಟ್ ಮತ್ತು 164 ಒಡಿಐ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬಳಿಕ ಕಾಮೆಂಟೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕಾಮೆಂಟರಿ ನೀಡಲು ಮುಂಬೈಗೆ ಆಗಮಿಸಿದ್ದರು. ಈ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (ಸಂಗ್ರಹ ಚಿತ್ರ)