ದುಬೈ: ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿರುವ ಡೆಲ್ಲಿ ತಂಡದ ಯುವ ಬೌಲರ್ ಕಗಿಸೋ ರಬಾಡರನ್ನು ವಿಶ್ವದ ಅತ್ಯುತ್ತಮ ಟಿ20 ಬೌಲರ್ಗಳಲ್ಲಿ ಒಬ್ಬರು ಎಂದು ಡೆಲ್ಲಿ ತಂಡ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಬಾಡ ಅವರ ಅದ್ಭುತ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಆರ್ಸಿಬಿ ವಿರುದ್ಧ 59 ರನ್ಗಳ ಜಯ ಸಾಧಿಸಿತ್ತು. 197 ರನ್ಗಳ ಬೆನ್ನತ್ತಿದ್ದ ಕೊಹ್ಲಿ ಪಡೆಯ 4 ವಿಕೆಟ್ ಪಡೆದು ರಬಾಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
'ಕಗಿಸೋ ರಬಾಡ ಟಿ20 ಕ್ರಿಕೆಟ್ನ ಅತ್ಯುತ್ತಮ ಬೌಲರ್ ಆಗಿದ್ದಾರೆ. ಆದ್ದರಿಂದಲೇ ಈ ಋತುವಿನಲ್ಲಿ ಅತ್ಯುತ್ತಮ ಆರಂಭ ಪಡೆದಿರುವುದು, ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕಿರುವ ಪ್ರತಿಫಲವಾಗಿದೆ. ಆರ್ಸಿಬಿಯಂತಹ ಉತ್ತಮ ತಂಡವನ್ನು 137 ರನ್ಗಳಿಗೆ ನಿಯಂತ್ರಿಸುವುದು ನಿಜಕ್ಕೂ ಆಹ್ಲಾದಕರವಾಗಿತ್ತು. ಬ್ಯಾಟ್ಸ್ಮನ್ಗಳು ಉತ್ತಮ ಲಯದಲ್ಲಿದ್ದು, ಮುಂದಿನ ಎರಡು ದಿನಗಳಲ್ಲಿ ಬರುವ ರಾಜಸ್ಥಾನ್ ತಂಡದ ವಿರುದ್ಧದ ಪಂದ್ಯಕ್ಕಾಗಿ ಎದುರು ನೋಡುತ್ತಿರುವೆ' ಎಂದು ಟ್ವಿಟರ್ನಲ್ಲಿ ರಿಕಿ ಪಾಂಟಿಂಗ್ ಬರೆದುಕೊಂಡಿದ್ದಾರೆ.
ಸೋಮವಾರದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಕೊಹ್ಲಿ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ಗೆ ಆಹ್ವಾನ ನೀಡಿದ್ದರು. ಸ್ಟೋಯ್ನಿಸ್ ಅವರ 53 ರನ್ಗಳ ನೆರವಿನಿಂದ ಡೆಲ್ಲಿ ತಂಡ196 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಆರ್ಸಿಬಿ ಅಕ್ಸರ್ ಪಟೇಲ್, ರಬಾಡ ಹಾಗೂ ಆ್ಯನ್ರಿಚ್ ಬೌಲಿಂಗ್ ದಾಳಿಗೆ ಕುಸಿದು 137 ರನ್ಗಳಿಸಲಷ್ಟೇ ಶಕ್ತವಾಗಿ 59 ರನ್ಗಳ ಹೀನಾಯ ಸೋಲು ಕಂಡಿತ್ತು.