ಅಹಮದಾಬಾದ್: ಆಂಗ್ಲರ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಅಜೇಯ 73 ರನ್ ಬಾರಿಸಿದರು. ಮರಳಿ ಲಯ ಕಂಡುಕೊಳ್ಳುವಲ್ಲಿ ಪಂದ್ಯಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ನೀಡಿದ ಸಲಹೆ ನೆರವಾಯಿತು ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಕೊಹ್ಲಿ, ತಂಡದ ಗೆಲುವಿಗೆ ಕೊಡುಗೆ ನೀಡುವುದು ಹೆಮ್ಮೆಯ ಸಂಗತಿ. 70ಕ್ಕೂ ಅಧಿಕ ರನ್ ಗಳಿಸಿರುವುದು ಸಂತಸ ತಂದಿದೆ. ಪಂದ್ಯಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಜೊತೆ ಮಾತನಾಡಿದ್ದೆ, ಎಸೆತಗಳ ಮೇಲೆ ಹೆಚ್ಚು ದೃಷ್ಟಿ ಹರಿಸುವಂತೆ (just to watch the ball) ಅವರು ಸಲಹೆ ನೀಡಿದ್ದರು. ಇದು ರನ್ ಗಳಿಸುವಲ್ಲಿ ಸಹಾಯಕವಾಯಿತು ಎಂದಿದ್ದಾರೆ.