ದುಬೈ: ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ 22ನೇ ತಾರೀಖಿನಂದು ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ ಎನ್ನುವುದು ಖಚಿತವಾಗಿದೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿ ಮುಗಿಸಿ ಯುಎಇಗೆ ಬಂದಿಳಿದಿರುವ ಜೋಸ್ ಬಟ್ಲರ್ ತಮ್ಮ ರಾಜಸ್ಥಾನ್ ರಾಯಲ್ಸ್ ಪರ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಬಟ್ಲರ್ ಬಯೋ ಸೆಕ್ಯೂರ್ ವಲಯದಿಂದ ಹೊರಬಂದ ಮೇಲೆ ಯುಎಇಗೆ ಕುಟುಂಬದವರೊಂದಿಗೆ ಯುಎಇಗೆ ಆಗಮಿಸಿದ್ದಾರೆ. ಈ ಕಾರಣದಿಂದ 6 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಬೇಕಿರುವುದು ಅನಿವಾರ್ಯವಾಗಿದೆ. ಹಾಗಾಗಿ, ಮೊದಲ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್ನ ಇನ್ಸ್ಸ್ಟಾಗ್ರಾಮ್ ಲೈವ್ನಲ್ಲಿ ಬಟ್ಲರ್ ಖಚಿತಪಡಿಸಿದ್ದಾರೆ.
ಈಗಾಗಲೇ ಇಂಗ್ಲೆಂಡ್ ತಂಡದವರೇ ಆದ ಬೆನ್ಸ್ಟೋಕ್ಸ್ ಕೂಡ ಇನ್ನು ಐಪಿಎಲ್ನಲ್ಲಿ ಆಡುವುದು ಖಚಿತವಾಗಿಲ್ಲ. ಇದೀಗ ಮೊದಲ ಪಂದ್ಯದಲ್ಲೇ ಬಟ್ಲರ್ ಕೂಡ ಆಡದಿರುವುದು ರಾಯಲ್ಸ್ಗೆ ದೊಡ್ಡ ಹೊಡೆತ ನೀಡಿದೆ. ಜೋಸ್ ಬಟ್ಲರ್ 2018ರಲ್ಲಿ 13 ಪಂದ್ಯಗಳಿಂದ 548 ರನ್ ಸಿಡಿಸಿದ್ದರು. 2019ರಲ್ಲಿ 8 ಪಂದ್ಯಗಳಿಂದ 311ರನ್ ಸಿಡಿಸಿದ್ದರು.