ಮ್ಯಾಂಚೆಸ್ಟರ್: ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಸಮಯೋಚಿತ ಆಟ ಪ್ರದರ್ಶಿಸಿದ ಕ್ರಿಸ್ ವೋಕ್ಸ್ (ಔಟಾಗದೆ 84 ರನ್) ಹಾಗೂ ಜೋಸ್ ಬಟ್ಲರ್ (75 ರನ್) ಅವರ ನೆರವಿನಿಂದ ಇಂಗ್ಲೆಂಡ್ ತಂಡ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ ನೀಡಿದ 277 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ಗೆ ಉತ್ತಮ ಆರಂಭ ದೊರಕಲಿಲ್ಲ. ತಂಡದ ಮೊತ್ತ 117 ರನ್‌ಗಳಾಗುವ ಅಷ್ಟರಲ್ಲಿ ಇಂಗ್ಲೆಂಡ್ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ವೋಕ್ಸ್-ಬಟ್ಲರ್ ಅಸರೆ:
ನಂತರ ಜೊತೆಯಾದ ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ಜೋಡಿ ಉತ್ತಮ ಬ್ಯಾಟಿಂಗ್ ನಡೆಸಿತು. 6ನೇ ವಿಕೆಟ್‌ಗೆ ಈ ಜೋಡಿ ಮುರಿಯದ 173 ರನ್‌ಗಳ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ರೂಟ್ ಪಡೆ 82.1 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಒಂದು ದಿನ ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.
ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪಾಕ್ ತಂಡ 109.3 ಓವರ್‌ಗಳಿಗೆ 326 ರನ್ ಗಳಿಸಿ ಆಲೌಟ್ ಆಗಿತ್ತು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 70.3 ಓವರ್‌ಗಳಿಗೆ 219 ರನ್‌ಗಳಿಗೆ ಆಲೌಟ್ ಆಗಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಮಂಕಾದ ಪಾಕ್ 46.4 ಓವರ್‌ಗಳಿಗೆ 169 ರನ್ ಗಳಿಸಿ ಆಲೌಟ್ ಆಗಿತ್ತು. 277 ರನ್ ಗುರಿ ಪಡೆದ ಇಗ್ಲೆಂಡ್ ಅರಂಭದಲ್ಲಿ ಕುಸಿತ ಕಂಡರೂ ವೋಕ್ಸ್ ಮತ್ತು ಬಟ್ಲರ್ ನೆರವಿನಿಂದ ಗೆಲುವಿನ ನಗೆ ಬೀರಿದೆ.