ಮ್ಯಾಂಚೆಸ್ಟರ್: ಸರಣಿ ನಿರ್ಣಾಯಕವಾದ ಪಂದ್ಯದಲ್ಲಿ ಮಿದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೈಸ್ಟೋವ್(112) ಅವರ ಭರ್ಜರಿ ಶತಕದ ನೆರವಿನಿಂದ 302 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಖಾತೆ ತೆರೆಯುವ ಮುನ್ನವೇ ಸ್ಟಾರ್ಕ್ ಎಸೆದ ಮೊದಲ ಓವರ್ನ ಮೊದಲೆರಡು ಎಸೆತಗಳಲ್ಲಿ ಜೇಸನ್ ರಾಯ್ ಹಾಗೂ ಜೋರ ರೂಟ್ ಶೂನ್ಯಕ್ಕೆ ಔಟಾದರು.
ಈ ವೇಳೆ 3ನೇ ವಿಕೆಟ್ಗೆ ಜೊತೆಯಾದ ಬೈರ್ಸ್ಟೋವ್ ಹಾಗೂ ಮಾರ್ಗನ್ 67 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಆ್ಯಡಂ ಜಂಪಾ ಓವರ್ನಲ್ಲಿ ಮಾರ್ಗನ್(23) ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟಾದರು. ನಂತರದ ಬಂದ ಬಟ್ಲರ್ ಕೂಡ ಜಂಪಾ ಓವರ್ನಲ್ಲಿಯೇ 8 ರನ್ಗಳಿಸಿ ಔಟಾದರು.
ತಂಡದ ಮೊತ್ತ 96ಕ್ಕೆ 4 ಸಂಕಷ್ಟದಲ್ಲಿದ್ದಾಗ ಬೈರ್ಸ್ಟೋವ್ ಜೊತೆ ಸೇರಿದ ಮೊದಲ ಪಂದ್ಯದ ಶತಕ ವೀರ ಸ್ಯಾಮ್ ಬಿಲ್ಲಿಂಗ್ಸ್ 5ನೇ ವಿಕೆಟ್ ಜೊತೆಯಾಟದಲ್ಲಿ 114 ರನ್ ಸೇರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ತಂದರು. 58 ಎಸೆತಗಳನ್ನು ಎದರುಸಿದ ಬಿಲ್ಲಿಂಗ್ಸ್ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 57 ರನ್ಗಳಿಸಿ ಜಂಪಾಗೆ 3 ಬಲಿಯಾದರು. ಬಿಲ್ಲಿಂಗ್ಸ್ ಔಟಾದ ಬೆನ್ನಲ್ಲೇ 126 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 112 ರನ್ಗಳಿಸಿದ್ದ ಬೈರ್ಸ್ಟೋವ್ ಕೂಡ ಕಮ್ಮಿನ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಅದ್ಭುತ ಇನ್ನಿಂಗ್ಸ್ ಮುಗಿಸಿದರು.
ಆದರೆ ಇನ್ನಿಂಗ್ಸ್ನ ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಕ್ರಿಸ್ ವೋಕ್ಸ್ 39 ಎಸೆತಗಳಲ್ಲಿ 53 ರನ್ ಪೇರಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿ ಔಟಾಗದೆ ಉಳಿದರು. ಟಾಮ್ ಕರ್ರನ್ 19 ಹಾಗೂ ರಶೀದ್ 11 ರನ್ಗಳಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ ಒಟ್ಟಾರೆ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 302 ರನ್ಗಳಿಸಿತು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 3 , ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಒಂದು ವಿಕೆಟ್ ಪಡೆದರು.