ನವದೆಹಲಿ:ಭಾರತದ ನಾಯಕರಾಗಿದ್ದ ಸೌರವ್ ಗಂಗೂಲಿ 2004ರ ಐತಿಹಾಸಿಕ ಪಾಕಿಸ್ತಾನ ಪ್ರವಾಸಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಲು ಬಹಳ ಉತ್ಸುಕರಾಗಿದ್ದರು, ಆದರೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮಾಹಿ ಕೂದಲೆಳೆ ಅಂತರದಿಂದ ಅವಕಾಶ ವಂಚಿತರಾದರು ಎಂದು ಆ ಸಮಯದಲ್ಲಿ ಭಾರತದ ಕೋಚ್ ಆಗಿದ್ದ ಜಾನ್ ರೈಟ್ ಬಹಿರಂಗ ಪಡಿಸಿದ್ದಾರೆ.
15 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ಟೆಸ್ಟ್ ತಂಡಕ್ಕೆ ಪಾರ್ಥಿವ್ ಪಟೇಲ್ರನ್ನು ಹಾಗೂ 5 ಪಂದ್ಯಗಳ ಏಕದಿನ ತಂಡಕ್ಕೆ ದ್ರಾವಿಡ್ರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು.
"ಧೋನಿ ನಮ್ಮೊಂದಿಗೆ 2004ರಲ್ಲಿ ಪಾಕಿಸ್ತಾನ ಪ್ರವಾಸ ಮಾಡುವವರಿದ್ದರು. ಅವರನ್ನು ತಂಡದಲ್ಲಿ ಸೇರಿಸಲು ಸೌರವ್ ತುಂಬಾ ಉತ್ಸುಕರಾಗಿದ್ದರು. ಆದರೆ ಅದು ಒಂದಿಬ್ಬರ ನಿರ್ಧಾರವಾಗಿದ್ದರಿಂದ ಮಾನ್ಯವಾಗಲಿಲ್ಲ. ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಕಾರಣ ಧೋನಿಗೆ ಅವಕಾಶ ಸಿಗಲಿಲ್ಲ" ಎಂದು ರೈಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಆ ಸರಣಿಯಲ್ಲಿ ಭಾರತ 2-1ರಲ್ಲಿ ಟೆಸ್ಟ್ ಸರಣಿ ಹಾಗೂ 3-2ರಲ್ಲಿ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು.
"ಅದಾಗಲೇ ಧೋನಿ ಹೆಸರು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬರಲು ಪ್ರಾರಂಭವಾಗಿತ್ತು. ಸೌರವ್ ಅವರ(ಧೋನಿ) ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯಗಳನ್ನು ಹೊಂದಿದ್ದರು ಮತ್ತು ಹೊಸ ಯುವಕರನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಆದರೆ ನಾಯಕನ ಎಲ್ಲಾ ವಿಚಾರಗಳು ಕೆಲವೊಮ್ಮೆ ಕಾರ್ಯರೂಪಕ್ಕೆ ಬರುವುದಿಲ್ಲ(ಧೋನಿಯನ್ನು ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ). ಆದರೆ ನಾನು ಆ ಸಮಯದಲ್ಲಿ ಧೋನಿ ಬಗ್ಗೆ ಸಾಕಷ್ಟು ಕೇಳಲು ಪ್ರಾರಂಭಿಸಿದ್ದೆ ಎಂದು 2000ದಿಂದ 2005ರವರೆಗೆ ಭಾರತದ ಕೋಚ್ ಆಗಿದ್ದ ರೈಟ್ ತಿಳಿಸಿದ್ದಾರೆ.
ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾಗದಿದ್ದರೂ ಅದೇ ವರ್ಷ ಧೋನಿ (23 ವರ್ಷ 169 ದಿನಗಳು) ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನಂತರ ಟೆಸ್ಟ್ ಕ್ರಿಕೆಟ್ಗೆ 2005ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದರು. ಅವರು 24 ವರ್ಷ 148 ದಿನಗಳಾಗಿದ್ದಾಗಲೇ ಭಾರತದ ಸೀಮಿತ ಓವರ್ ತಂಡದ ಚುಕ್ಕಾಣಿ ಹಿಡಿದರು. ನಂತರ ಭಾರತ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರಾದರು.