ಲಂಡನ್:ಕಳೆದ ಮೂರು ತಿಂಗಳ ಯುವ ಬೌಲರ್ ಜೋಫ್ರಾ ಆರ್ಚರ್ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರಾಸಕ್ತಿ ಹೊಂದಿತ್ತು. ಆದರೆ, ಕೊನೆಗಳಿಗೆಯಲ್ಲಿ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಅವರೇ ಇಂಗ್ಲೆಂಡ್ 44 ವರ್ಷಗಳ ವಿಶ್ವಕಪ್ ಕನಸನ್ನು ನನಸು ಮಾಡಿದ್ದಾರೆ.
3 ತಿಂಗಳ ಹಿಂದೆ ತಂಡಕ್ಕೆ ಬೇಕಾ - ಬೇಡ ಎಂಬಂತಿದ್ದ ಆ ಬೌಲರ್ ಇಂಗ್ಲೆಂಡ್ ತಂಡದ ವಿಶ್ವಕಪ್ ಹೀರೋ!
ಇಂಗ್ಲೆಂಡ್ ತಂಡದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಬೌಲರ್ ಜೋಫ್ರಾ ಆರ್ಚರ್ 2019ರ ವಿಶ್ವಕಪ್ ಇಂಗ್ಲೆಂಡ್ ತಂಡಕ್ಕೆ ಸೇರಲು ಮಹತ್ತರ ಪಾತ್ರವಹಿದ್ದಾರೆ.
ಆರ್ಚರ್ ವಿಂಡೀಸ್ನಿಂದ 2015ರಲ್ಲಿ ಇಂಗ್ಲೆಂಡ್ಗೆ ಬಂದು ನೆಲೆಸಿದ್ದರು. ಅಲ್ಲಿನ ನಿಯಮದ ಪ್ರಕಾರ 3 ವರ್ಷ ಇಂಗ್ಲೆಂಡ್ನಲ್ಲಿ ನೆಲೆಸಿದವರಿಗೆ ಮಾತ್ರ ರಾಷ್ಟ್ರೀಯ ತಂಡದಲ್ಲಿ ಅವಕಾಶವಿದ್ದರಿಂದ ರಾಷ್ಟ್ರೀಯ ತಂಡದ ಕನಸು ನನಸಾಗಲು 4 ವರ್ಷ ಬೇಕಾಯಿತು. ಇಂಗ್ಲೆಂಡ್ ತಂಡವನ್ನು ಸೇರುವ ಮುನ್ನ ಆರ್ಚರ್ ವಿಶ್ವದ ಹಲವು ಟಿ - 20 ಲೀಗ್ಗಳಲ್ಲಿ, ಇಂಗ್ಲೆಂಡ್ನ ಕೌಂಟಿ ತಂಡವಾದ ಸಸೆಕ್ಸ್, ಬಿಗ್ಬ್ಯಾಷ್, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶಸಿಕ್ಕಿರಲಿಲ್ಲ. ಕೊನೆಗೆ ವಿಶ್ವಕಪ್ಗೂ ಮುನ್ನ ನಡೆದಿದ್ದ ಪಾಕ್ ವಿರುದ್ಧದ ಏಕದಿನ ಸರಣಿಗೆ ಆರ್ಚರ್ರಿಗೆ ಅವಕಾಶ ನೀಡಲಾಗಿತ್ತು.
4 ವರ್ಷ ಕನಸಿನ ತಂಡ ಸೇರಲು ಚಾತಕ ಪಕ್ಷಿಯಂತೆ ಕಾದಿದ್ದ ಆರ್ಚರ್ಗೆ ವಿಶ್ವಕಪ್ ತಂಡದ ಹೆಸರನ್ನು ಅಂತಿಮ ಪಟ್ಟಿ ಸಲ್ಲಿಸುವ ವೇಳೆ ಡೇವಿಡ್ ವಿಲ್ಲೆ ಬದಲಿಗೆ ತಂಡ ಸೇರಿಸಿಕೊಳ್ಳಲಾಗಿತ್ತು. ಇದೊಂದು ನಿರ್ಧಾರ ಇಡೀ ಇಂಗ್ಲೆಂಡ್ ತಂಡದ ವಿಶ್ವಕಪ್ ಕನಸು ನನಸಾಗುವಂತೆ ಮಾಡಿತು.
ಟೂರ್ನಿ ಉದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆರ್ಚರ್ 9 ಪಂದ್ಯಗಳಲ್ಲಿ 20 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಕಿವೀಸ್ ವಿರುದ್ಧ ಅನುಭವಿ ಬೌಲರ್ಗಳಿದ್ದರೂ ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ಗೆ ಗೆಲುವು ತಂದುಕೊಡುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿದಿಕೊಳ್ಳುವಲ್ಲಿ ವೆಸ್ಟ್ ಇಂಡೀಸ್ ಮೂಲದ ಬೌಲರ್ ಯಶಸ್ವಿಯಾಗಿದ್ದಾರೆ.