ಚೆನ್ನೈ:ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಪರ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿದ ನಾಯಕ ಎಂಬ ದಾಖಲೆಗೆ ಜೋ ರೂಟ್ ಪಾತ್ರರಾಗಿದ್ದಾರೆ.
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 227 ರನ್ಗಳಿಂದ ಮಣಿಸಿತು. ಈ ಮೂಲಕ ಜೋ ರೂಟ್ ನಾಯಕನಾಗಿ 26ನೇ ಜಯ ಸಾಧಿಸಿದರು.
47 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿರುವ ಜೋ ರೂಟ್, 26 ಪಂದ್ಯಗಳಲ್ಲಿ ಜಯ, 15 ಸೋಲು, 6 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಇವರನ್ನು ಹೊರೆತುಪಡಿಸಿದರೆ ಮೈಕಲ್ ವಾನ್ 51 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, 26 ಜಯ, 11 ಸೋಲು ಹಾಗೂ 14 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ.
ಇದಲ್ಲದೆ ಏಷ್ಯಾದಲ್ಲಿ ನಾಯಕನಾಗಿ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲಿಸಿರುವ ನಾಯಕ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರವಾಗಿದ್ದಾರೆ. ಏಷ್ಯಾ ನೆಲದಲ್ಲಿ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ 5 ಹಾಗೂ ಭಾರತದ ವಿರುದ್ಧ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 21 ಪಂದ್ಯಗಳಲ್ಲಿ 8, ವೆಸ್ಟ್ ಇಂಡೀಸ್ ಕ್ಲೈವ್ ಲಾಯ್ಡ್ 17 ಟೆಸ್ಟ್ ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ, ಏಷ್ಯಾದಲ್ಲಿ ಗರಿಷ್ಠ ಜಯ ಪಡೆದಿರುವ ನಾಯಕರಾಗಿದ್ದಾರೆ.
ಇದನ್ನು ಓದಿ:ಚೆನ್ನೈ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 227 ರನ್ಗಳ ಹೀನಾಯ ಸೋಲು