ಕೋಲ್ಕತ್ತಾ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಮೆಂಟ್ನ ಬಿ ಗುಂಪಿನ ಪಂದ್ಯದಲ್ಲಿ ಇಶಾನ್ ಕಿಶನ್ ನೇತೃತ್ವದ ಜಾರ್ಖಂಡ್ ತಂಡ ಹೈದರಾಬಾದ್ ವಿರುದ್ಧ ಸೂಪರ್ ಓವರ್ ಮೂಲಕ ರೋಚಕ ಜಯ ಸಾಧಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಜಾರ್ಖಂಡ್ ಹೈದರಾಬಾದ್ ತಂಡವನ್ನು 20 ಓವರ್ಗಳಲ್ಲಿ 139 ರನ್ಗಳಿಗೆ ನಿಯಂತ್ರಿಸಿತ್ತು. ಎಡಗೈ ವೇಗಿ ವಿಕಾಶ್ ಸಿಂಗ್ ಹಾಗೂ ವಿವೇಕಾನಂದ್ ತಿವಾರಿ ತಲಾ ಮೂರು ವಿಕೆಟ್ ಪಡೆದಿದ್ದರು.
ಹೈದರಾಬಾದ್ ಪರ ಬಿ.ಸಂದೀಪ್ 37, ಹಿಮಾಲಯ್ ಅಗರ್ವಾಲ್ ಮತ್ತು ಬುದ್ದಿ ರಾಹುಲ್ ತಲಾ 26 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತಗಳಿಸಲು ನೆರವಾಗಿದ್ದರು.
140 ರನ್ಗಳ ಗುರಿ ಬೆನ್ನತ್ತಿದ ಜಾರ್ಖಂಡ್ ನಾಯಕ ಇಶಾನ್ ಕಿಶನ್(27) ಹಾಗೂ ಉತ್ಕರ್ಷ್ ಸಿಂಗ್(29) ಮೊದಲ ವಿಕೆಟ್ಗೆ 43 ರನ್ಗಳಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಕೌಶಾಲ್ ಸಿಂಗ್(24) ಮತ್ತು ಅನುಕುಲ್ ರಾಯ್(18)ಅವರ ಸಾಹಸದಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಹೈದರಾಬಾದ್ ಪರ ಅಜಯ್ ದೇವ್ 4, ರವಿತೇಜ 2 ವಿಕೆಟ್ ಪಡೆದು ಮಿಂಚಿದರು.
ಇನ್ನು ರಕ್ಷಾನ್ ರೆಡ್ಡಿ ಎಸೆದ ಸೂಪರ್ ಓವರ್ನಲ್ಲಿ ಇಶಾನ್ ಕಿಶನ್ 2 ಸಿಕ್ಸರ್ ಸಿಡಿಸಿದರೆ, ಅನುಕುಲ್ ರಾಯ್ ಒಂದು ಸಿಕ್ಸರ್ ಸಿಡಿಸುವ ಮೂಲಕ 23 ರನ್ ಸೇರಿಸಿದರು. ಆದರೆ ಹೈದರಾಬಾದ್ ಕೇವಲ 14 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಜಾರ್ಖಂಡ್ 12 ಅಂಕಗಳೊಂದಿಗೆ ಗುಂಪಿನಲ್ಲಿ 3ನೇ ಸ್ಥಾನ ಪಡೆದುಕೊಂಡಿತು. ಹೈದರಾಬಾದ್ ಕೇವಲ ಒಂದು ಗೆಲುವಿನೊಂದಿಗೆ ಕೊನೆ ಸ್ಥಾನ ಪಡೆಯಿತು.