ಅಗರ್ತಲಾ(ತ್ರಿಪುರ): ರಣಜಿ ಟ್ರೋಫಿ ಇತಿಹಾಸದಲ್ಲಿ ಫಾಲೋಆನ್ಗೆ ತುತ್ತಾದರೂ ಪಂದ್ಯ ಗೆಲ್ಲುವ ಮೂಲಕ ಜಾರ್ಖಂಡ್ ತಂಡ ದಾಖಲೆ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ತ್ರಿಪುರ 289 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತ ಹಿಂಬಾಲಿಸಿದ ಜಾರ್ಖಂಡ್ ತಂಡ 136 ರನ್ಗಳಿಗೆ ಆಲೌಟ್ ಆಗಿದ್ದರಿಂದ ತ್ರಿಪುರ ನಾಯಕ ಫಾಲೋ ಆನ್ ಹೇರಿದ್ರು.
153 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ ಜಾರ್ಖಂಡ್ ಸೌರಭ್ ತಿವಾರಿ (122) ಹಾಗೂ ಇಶಾಂಕ್ ಜಗ್ಗಿ(107) ಶತಕಗಳ ನೆರವಿನಿಂದ 418 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿಕೊಂಡು ತ್ರಿಪುರಕ್ಕೆ 266 ರನ್ಗಳ ಗುರಿ ನೀಡಿತು.
ಇತ್ತ ಗೆಲ್ಲಬಹುದಾದ ಪಂದ್ಯವನ್ನು ಫಾಲೋಆನ್ ಹೇರುವ ಮೂಲಕ ಪಜೀತಿಗೆ ಸಿಲುಕಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ತ್ರಿಪುರ ತಂಡ ಜಾರ್ಖಂಡ್ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾರದೇ 211 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ತಂಡ 54 ರನ್ಗಳ ಅನಿರೀಕ್ಷಿತ ಸೋಲು ಅನುಭವಿಸಿದೆ. ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಮಣಿಶಂಕರ್ ಮುರಾಸಿಂಗ್(103) ಶತಕ ಕೂಡ ವ್ಯರ್ಥವಾಯಿತು.