ನವದೆಹಲಿ: ಭಾರತ ತಂಡದ ಅಗ್ರ ಶ್ರೇಯಾಂಕಿತ ವೇಗಿ ಜಸ್ಪ್ರೀತ್ ಬುಮ್ರಾ ಅವಕಾಶ ಸಿಕ್ಕರೂ ಕೌಂಟಿ ಕ್ರಿಕೆಟ್ ಆಡಬಾರದು ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಮ್ ಹೇಳಿದ್ದಾರೆ.
ಕೌಂಟಿಯಂತಹ ಟೂರ್ನಿ ಯುವ ಆಟಗಾರರಿಗೆ ಮಾತ್ರ ಉತ್ತಮ ವೇದಿಕೆ. ಬುಮ್ರಾ ಅಂತಹ ಲೀಗ್ನಲ್ಲಿ ಆಡಿದರೆ ಅವರು ಬಳಲಲಿದ್ದಾರೆ. ಹಾಗಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ಸಿಕ್ಕಾಗ ವಿಶ್ರಾಂತಿ ತೆಗದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಯುವ ವೇಗಿಗೆ ಕಿವಿಮಾತು ಹೇಳಿದ್ದಾರೆ.
2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬುಮ್ರಾ, 64 ಏಕದಿನ, 50 ಟಿ20, 14 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 104, ಟಿ20ಯಲ್ಲಿ 59 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 68 ವಿಕೆಟ್ ಪಡೆದ ಸಾಧನೆ ಅವರದ್ದು.
ಬೆನ್ನು ನೋವಿಗೆ ತುತ್ತಾಗಿ ಕೆಲವು ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದ ಬುಮ್ರಾ, ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಟ್ ಪಡೆಯದೆ ನಿರಾಶೆ ಅನುಭವಿಸಿದ್ದರು. ಈ ವೇಳೆ ಅವರು ವಿಶ್ವದಾದ್ಯಂತ ಕ್ರಿಕೆಟ್ ತಜ್ಞರಿಂದ ಟೀಕೆಗೊಳಗಾಗಿದ್ದರು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮರಳಿ ಫಾರ್ಮ್ ಕಂಡುಕೊಂಡ ಕ್ರಿಕೆಟಿಗ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರಿಸಿದ್ದರು.