ಮುಂಬೈ: ಕ್ರಿಕೆಟ್ ಜಗತ್ತಿಗೆ ಅಂಬೆಗಾಲಿಡುತ್ತಿರುವ ಪುಟ್ಟ ರಾಷ್ಟ್ರ 2020ರ ಅಂಡರ್ 19 ವಿಶ್ವಕಪ್ಗೆ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿದೆ.
ವಿಶ್ವದಲ್ಲಿ ಕ್ರಿಕೆಟ್ ಜನನವಾಗಿ 150 ವರ್ಷಗಳು ಉರುಳಿವೆ. ಬ್ರಿಟಿಷರು ಜಗತ್ತಿಗೆ ಪರಿಚಿಯಿಸಿದ ಕ್ರಿಕೆಟ್ ಜಪಾನ್ನಲ್ಲಿ ಶತಮಾನದ ನಂತರ ತಲೆ ಎತ್ತಿದ್ದು ಇದೇ ಮೊದಲ ಬಾರಿಗೆ ವಿಶ್ವಕಪ್ನಂತಹ ಬೃಹತ್ ಕ್ರಿಕೆಟ್ ಟೂರ್ನಿಗೆ ಕಾಲಿಡುತ್ತಿದೆ. 1863 ರಲ್ಲಿ ಜಪಾನ್ಗೆ ಕ್ರಿಕೆಟ್ ಪರಿಚಯವಿತ್ತಾದರೂ, ಜಪಾನಿಯರು ಕ್ರಿಕೆಟ್ಗೆ ಯಾವುದೇ ಮಹತ್ವ ನೀಡಿರಲಿಲ್ಲ. ಆದರೆ ಕಾಲ ಬದಲಾಗಿದೆ. ಯುವ ಪೀಳಿಗೆ ಫುಟ್ಬಾಲ್, ಬೇಸ್ಬಾಲ್ ಬಿಟ್ಟರೆ ಹೆಚ್ಚು ಆಕರ್ಷಿತವಾಗುವ ಕ್ರೀಡೆಯಂದರೆ ಅದು ಕ್ರಿಕೆಟ್. ಇದೀಗ ಜಪಾನ್ ಕೂಡ ಅದರಿಂದ ಹೊರತಾಗಿಲ್ಲ. ಬೇಸ್ಬಾಲ್ನಲ್ಲಿ ಕಿಂಗ್ ಆದರೂ ನಿಧಾನವಾಗಿ ಅದೇ ಮಾದರಿಯಲ್ಲಿರುವ ಕ್ರಿಕೆಟ್ ಆಟವನ್ನು ಮೈಗೂಡಿಸಿಕೊಳ್ಳುತ್ತಿದ್ದು 2020 ಅಂಡರ್ 19 ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಜಪಾನ್ನಲ್ಲಿ ಕ್ರಿಕೆಟ್ ಉದಯ:
ಕ್ರಿಕೆಟ್ ಕನಸು ಕಾಣುತ್ತಿದ್ದ ಜಪಾನ್ 1980 ರಲ್ಲಿ ಕ್ರಿಕೆಟ್ ಅನ್ನು ಒಂದು ಕ್ರೀಡೆಯಾಗಿ ಮಾನ್ಯ ಮಾಡಿತು. 1986 ರಲ್ಲಿ ತಂಡ ರಚನೆ ಮಾಡಿಕೊಂಡ ಜಪಾನ್ 2000ನೇ ಇಸವಿಯಲ್ಲಿ ಮೊದಲ ಬಾರಿಗೆ 50 ಓವರ್ಗಳ ಕ್ರಿಕೆಟ್ನಲ್ಲಿ 100 ರನ್ ಗಡಿದಾಟಿತ್ತು.
3000 ಆಟಗಾರರು 200 ತಂಡಗಳು:
ಕ್ರಿಕೆಟ್ ಜಗತ್ತಿಗೆ ದಿಟ್ಟ ಹೆಜ್ಜೆ ಇಟ್ಟಿರುವ ಜಪಾನ್ನಲ್ಲಿ ಮೊದಲು ಕ್ರಿಕೆಟ್ ಸನೋದಲ್ಲಿ ಮೊದಲು ತಲೆ ಎತ್ತಿತ್ತು. ನಂತರ ನಿಧಾನವಾಗಿ ಜಪಾನ್ನ ಯುವ ಕ್ರಿಕೆಟಿಗರು ಬಹುಬೇಗನೆ ಕ್ರಿಕೆಟ್ಅನ್ನು ಅಪ್ಪಿಕೊಂಡರು. ಇದೀಗ ಜಪಾನ್ನಲ್ಲಿ 3000 ಸಾವಿರ ಕ್ರಿಕೆಟಿಗರಿದ್ದಾರೆ . ಅಂಡರ್ 15, ಮಹಿಳಾ ತಂಡಗಳು ಹಾಗೂ ವಿಶ್ವವಿದ್ಯಾಲಯ ತಂಡಗಳನ್ನು ಸೇರಿಸಿದರೆ ಸುಮಾರು 200 ತಂಡಗಳು ತಲೆ ಎತ್ತಿವೆ. ಸನೋ ಜಪಾನ್ ಪಾಲಿನ ಕ್ರಿಕೆಟ್ ಕಾಶಿಯಾಗಿದ್ದು ಇಲ್ಲಿ 2019ರಲ್ಲಿ ಸುಮಾರು ಸುಮಾರು 180 ಪಂದ್ಯಗಳು ನಡೆದಿವೆ.
ವಿಶ್ವಕಪ್ಗೆ ಅರ್ಹತೆ :
ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಈಸ್ಟ್ ಏಷ್ಯಾ ವಿಭಾಗದಿಂದ ಜಪಾನ್ ಹಾಗೂ ಪಿಎನ್ಜಿ ಫೈನಲ್ ತಲುಪಿದ್ದವು. ಆದರೆ ಪಿಎನ್ಜಿ ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ತಂಡದ 14 ಆಟಗಾರರಲ್ಲಿ 7 ಆಟಗಾರರನ್ನು ನಿಷೇಧಿಸಿತ್ತು. ಇದರಿಂದ ಜಪಾನ್ ಸುಲಭವಾಗಿ 2020ರ ವಿಶ್ವಕಪ್ಗೆ ಎಂಟ್ರಿ ಪಡೆದುಕೊಂಡಿದೆ. ಪಿಎನ್ಜಿ ಕೆಲವು ಆಟಗಾರರು ಸನೋದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರಿಂದ ಅವರ ಮೇಲೆ ಕ್ರಿಕೆಟ್ ಪಿಎನ್ಜಿ ನಿಷೇಧದ ಕಠಿಣ ನಿರ್ಧಾರ ತೆಗೆದುಕೊಂಡಿದಲ್ಲದೆ ಚೊಚ್ಚಲ ವಿಶ್ವಕಪ್ ಆಡುವ ಅವಕಾಶ ಕಳೆದುಕೊಂಡಿದೆ.
2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್ನಲ್ಲಿ ಜಪಾನ್ ತಂಡ ನ್ಯೂಜಿಲ್ಯಾಂಡ್, ಭಾರತ ಹಾಗೂ ಶ್ರೀಲಂಕಾ ತಂಡಗಳಿರುವ ಗುಂಪಿನಲ್ಲಿ ಸ್ಥಾನದಲ್ಲಿ ಪಡೆದುಕೊಂಡಿದೆ. ತನ್ನ ಮೊದಲ ಪಂದ್ಯವನ್ನು ಜನವರಿ 18 ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.