ಮುಂಬೈ: ಭಾರತದ ಮಾಜಿ ವಿಕೆಟ್ ಕೀಪರ್ ಹಾಗೂ ಕಾಮಂಟೇಟರ್ ದೀಪ್ ದಾಸಗುಪ್ತಾ ವೈಯಕ್ತಿಕ ಕಾರಣಗಳಿಂದ ಸಿಎಸ್ಕೆಯಿಂದ ಹೊರಬಂದಿರುವ ಹರ್ಭಜನ್ ಸಿಂಗ್ ಬದಲಿಗೆ ದೇಶಿ ಪ್ರತಿಭೆ ಜಲಜ್ ಸಕ್ಷೇನಾು ಸೂಕ್ತವಾದ ಆಟಗಾರ ಎಂದು ತಿಳಿಸಿದ್ದಾರೆ.
2020ರ ಐಪಿಎಲ್ನಿಂದ ಸುರೇಶ್ ರೈನಾ ಹೊರಬಂದ ಬೆನ್ನಲ್ಲೇ ಅನುಭವಿ ಬೌಲರ್ ಹರ್ಭಜನ್ ಸಿಂಗ್ ಕೂಡ ತಾವೂ ಐಪಿಎಲ್ನಿಂದ ಹೊರ ಉಳಿಯುವುದಾಗಿ ನಿನ್ನೆ ಘೋಷಿಸಿಕೊಂಡಿದ್ದರು. ಇದೀಗ ಅವರ ಜಾಗಕ್ಕೆ ಸೂಕ್ತವಾದ ಆಟಗಾರನನ್ನು ಹುಡುಕುತ್ತಿರುವ ಸಿಎಸ್ಕೆ ಪ್ರಾಂಚೈಸಿಗೆ ದೀಪ್ ದಾಸಗುಪ್ತಾ ಪ್ರಥಮ ದರ್ಜೆ ಕ್ರಿಕೆಟ್ನ ಆಲ್ರೌಂಡರ್ ಸಕ್ಸೇನಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
33 ವರ್ಷದ ಜಲಜ್ ಸಕ್ಸೇನಾ 123 ಪ್ರಥಮ ದರ್ಜೆ ಪಂದ್ಯಗಳಿಂದ 6334 ರನ್ ಸಿಡಿಸಿದ್ದಾರೆ. 14 ಶತಕ ಹಾಗೂ 31 ಅರ್ಧಶತಕ ಕೂಡ ದಾಖಲಿಸಿದ್ದಾರೆ. ಜೊತೆಗೆ 21 ಬಾರಿ 5 ವಿಕೆಟ್ ಸಾಧನೆ ಮಾಡಿರುವ ಅವರು 347 ವಿಕೆಟ್ಗಳನ್ನು ಪಡೆದಿದ್ದಾರೆ. 54 ಟಿ20 ಪಂದ್ಯಗಳಿಂದ 633ರನ್ ಹಾಗೂ 49 ವಿಕೆಟ್ ಪಡೆದಿದ್ದಾರೆ.
ಭಜ್ಜಿ ಜಾಗಕ್ಕೆ ಜಲಜ್ ಸಕ್ಸೇನಾ ಅರ್ಹರು. ಅವರು ಅದ್ಭುತ ಆಲ್ರೌಂಡರ್ ಆಗಿದ್ದು, ಸಿಎಸ್ಕೆ ಖಂಡಿತ ಅವರನ್ನು ನೋಡಬಹುದೆಂದು ನಾನು ಭಾವಿಸುತ್ತೇನೆ. ಸಕ್ಸೇನಾ ಖಂಡಿತ ಭಜ್ಜಿ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಕ್ರಿಕ್ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಸಕ್ಸೇನಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಸೀಮಿತ ಓವರ್ಗಳ ಪಂದ್ಯದಲ್ಲೂ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಪಿನ್ಗೆ ನೆರವು ನೀಡುವ ಯುಎಇನಲ್ಲಿ ಸಿಎಸ್ಕೆ ಹರ್ಭಜನ್ ಸಿಂಗ್ರನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ ಎಂದಿದ್ದಾರೆ.