ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಆಸ್ಟ್ರೇಲಿಯಾದ ಸ್ಪಿನ್ನರ್ ಆಷ್ಟನ್ ಅಗರ್ ಅವರು ಭಾರತದ ರವೀಂದ್ರ ಜಡೇಜಾ ಅವರಂತೆ ಆಗಬೇಕೆಂಬ ಆಸೆ ಇದೆ ಎಂದಿದ್ದಾರೆ.
ನಿನ್ನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಷ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಸಹಾಯದಿಂದ ಆಸೀಸ್ ತಂಡ ದಕ್ಷಿಣ ಆಫ್ರಿಕಾವನ್ನು 107 ರನ್‌ಗಳಿಂದ ಸೋಲಿಸಿತು. ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕಡಿಮೆ ಅವಧಿಯಲ್ಲೆ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅಗರ್, ಭಾರತ ಸರಣಿಯ ನಂತರ ನಾನು ರವೀಂದ್ರ ಜಡೇಜಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ವಿಶ್ವ ಕ್ರಿಕೆಟ್ನಲ್ಲೆ ಜಡೇಜಾ ನನ್ನ ನೆಚ್ಚಿನ ಆಟಗಾರ. ಅವರಂತೆ ನಾನು ಕೂಡ ಕ್ರಿಕೆಟ್ ಆಡಲು ಬಯಸುತ್ತೇನೆ. ಅವರೊಬ್ಬ ರಾಕ್ಸ್ಟಾರ್. ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಜಡೇಜಾರನ್ನ ಕೊಂಡಾಡಿದ್ದಾರೆ.
ಮೈದಾನಕ್ಕೆ ಇಳಿದಾಗ ಅವರ ಅವರ ಆತ್ಮ ವಿಶ್ವಾಸವನ್ನು ಗಮನಿಸಿ, ಚೆಂಡನ್ನು ಸ್ಪಿನ್ ಮಾಡಲು ಪ್ರಯತ್ನಿಸಿ ಎಂದು ಜಡೇಜಾ ತಿಳಿಸಿದರು ಅಂತ ಅಗರ್ ಹೇಳಿಕೊಂಡಿದ್ದಾರೆ. ಮುಂದುವರಿದಂತೆ, ಜಡೇಜಾ ಬ್ಯಾಟಿಂಗ್ ಮಾಡುವಾಗ ತುಂಬಾ ಸಕಾರಾತ್ಮಕ ಮನೋಭಾವ ಹೊಂದಿರುತ್ತಾರೆ. ಫೀಲ್ಡಿಂಗ್ನಲ್ಲೂ ಅದೇ ರೀತಿಯಲ್ಲಿ ಇರುತ್ತಾರೆ ಎಂದು ಅಗರ್ ಹೇಳಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಎಂಟನೇ ಓವರ್‌ನಲ್ಲಿ ದಾಳಿ ನಡೆಸಿದ ಅಗರ್, ಫಾಫ್ ಡು ಪ್ಲೆಸಿಸ್ (24), ಫೆಹ್ಲುಂಕ್ವಾಯೊ (0) ಮತ್ತು ಡೇಲ್ ಸ್ಟೇನ್ (0) ಅವರ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡರು.