ಸಿಡ್ನಿ: ರವೀಂದ್ರ ಜಡೇಜಾ ಹೊಂದಿರುವ ಅವರ ಆಲ್ರೌಂಡರ್ ಕೌಶಲ್ಯಗಳಿಗೆ ತಕ್ಕಂತೆ ಸಿಕ್ಕಬೇಕಿರುವ ಸ್ಥಾನಮಾನ ಸಿಗುತ್ತಿಲ್ಲ. ಅವರ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಜಡೇಜಾ ಹೆಲ್ಮೆಟ್ಗೆ ಚೆಂಡು ಬಡಿದಿತ್ತು. ಈ ಕಾರಣದಿಂದ ಅವರ ಬದಲು ಚಹಾಲ್ ಕನ್ಕ್ಯೂಷನ್ ಆಟಗಾರನಾಗಿ ಆಡಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಿಂದ ಜಡೇಜಾ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ತುಂಬಲಾರದ ನಷ್ಟ ಎಂದು ಅವರು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
" ರವೀಂದ್ರ ಜಡೇಜಾ ಸತತ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾ ಪರ ವೈಟ್ ಬಾಲ್ ಕ್ರಿಕೆಟ್ನಲ್ಲಿ ತಾವೊಬ್ಬ ಮೌಲ್ಯಯುತ ಹಾಗೂ ತಂಡದ ಸಮತೋಲನಕ್ಕೆ ಅಗತ್ಯವಾಗಿರುವ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ" ಎಂದು ಟ್ವೀಟ್ನಲ್ಲಿ ಕೈಫ್ ತಿಳಿಸಿದ್ದಾರೆ.