ಬ್ಲೂಮ್‌ಫಾಂಟೈನ್(ದಕ್ಷಿಣ ಆಫ್ರಿಕಾ): ಸತತ ಸರಣಿ ಸೋಲುಗಳಿಂದ ಬಳಲಿದ್ದ ದಕ್ಷಿಣ ಆಫ್ರಿಕಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್ಗಳಿಂದ ಬಗ್ಗು ಬಡಿದು ಇನ್ನೂ ಒಂದು ಪಂದ್ಯವಿರುವಂತೆಯೇ 2-0 ಮೂಲಕ ಸರಣಿ ವಶಪಡಿಸಿಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ 271 ರನ್ ಗಳಿಸಿತ್ತು. ನಾಯಕ ಆ್ಯರೋನ್ ಫಿಂಚ್ 69, ಡಾರ್ಸಿ ಶಾರ್ಟ್ 69, ಡೇವಿಡ್ ವಾರ್ನರ್ 35, ಮಿಚೆಲ್ ಮಾರ್ಷ್ 36 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
ದಕ್ಷಿಣ ಆಫ್ರಿಕಾ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಲುಂಗಿ ಎಂಗಿಡಿ 58 ರನ್ ನೀಡಿ 6 ವಿಕೆಟ್ ಪಡೆದರು. ಆ್ಯನ್ರಿಚ್ ನಾರ್ಟ್ಜ್ 2, ಪೆಹ್ಲುಕ್ವಾಯೋ ಹಾಗೂ ತಬ್ರಾಯಿಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
272 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೊದಲ ಓವರ್ನಲ್ಲೇ ನಾಯಕ ಡಿಕಾಕ್(0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಎರಡನೇ ವಿಕೆಟ್ಗೆ ಜೊತೆಯಾದ ಜೆಜೆ ಸ್ಮಟ್ಸ್(41) ಹಾಗೂ ಜೆನ್ನೆಮಾನ್ ಮಲಾನ್(129) 91 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.
ಸ್ಮಟ್ಸ್ ಔಟಾದ ನಂತರ ಬಂದ ವಿರೆಯಾನ್ನೆ ಕೇವಲ 3 ರನ್ಗಳಿಸಿ ಔಟಾದರು. ಆದರೆ ನಾಲ್ಕನೇ ವಿಕೆಟ್ ಒಂದಾದ ಮಲಾನ್-ಕ್ಲಾಸೆನ್ ಜೋಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಜೋಡಿ 4ನೇ ವಿಕೆಟ್ಗೆ 81 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು. ಕ್ಲಾಸೆನ್ 52 ಎಸೆತಗಳಲ್ಲಿ 51 ರನ್ಗಳಿಸಿದರು.
ಆರಂಭಿಕನಾಗಿ ಕಣಕ್ಕಿಳಿದ ಮಲಾನ್ 139 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 129 ರನ್ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಮಿಲ್ಲರ್(37) ಜೊತೆಗೆ 5ನೇ ವಿಕೆಟ್ಗೆ ಮುರಿಯದೆ 90 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೊದಲ ಪಂದ್ಯವನ್ನು 74 ರನ್ಗಳಿಂದ ಗೆದ್ದಿದ್ದ ಹರಿಣಗಳು ಎರಡನೇ ಪಂದ್ಯವನ್ನು ಗೆದ್ದು ವರ್ಷದ ಬಳಿಕ ಮೊದಲ ಸರಣಿ ಗೆದ್ದರು. ಈ ಮಧ್ಯೆ ಶ್ರೀಲಂಕಾ ಹಾಗೂ ಭಾರತದ ವಿರುದ್ಧ ಟೆಸ್ಟ್ ಸರಣಿ, ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಕಳೆದುಕೊಂಡಿದ್ದರು.
ಇನ್ನು ಆಸ್ಟ್ರೇಲಿಯಾ ಸತತ 2 ಏಕದಿನ ಸರಣಿಯನ್ನ ಕಳೆದುಕೊಂಡಂತಾಯಿತು. ಜನವರಿಯಲ್ಲಿ ನಡೆದಿದ್ದ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 2-1ರಲ್ಲಿ ಸೋಲು ಕಂಡಿತ್ತು.