ಹೈದರಾಬಾದ್ :2019ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ರಾಹುಲ್ ಚಹಾರ್ ಹಾಗೂ ದೀಪಕ್ ಚಹಾರ್ ತಾವಿಬ್ಬರೂ ಬೆಳೆದುಬಂದ ಬಗ್ಗೆ ಮನದಾಳ ಹಂಚಿಕೊಂಡಿದ್ದಾರೆ.
ಬಿಸಿಸಿಐ ಟಿವಿ ಜೊತೆ ಅನಿಸಿಕೆ ವ್ಯಕ್ತಪಡಿಸಿರುವ ಚಹಾರ್ ಸಹೋದರರು, ತಮ್ಮ ಆರಂಭಿಕ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲು ತಾನು ಕ್ರಿಕೆಟ್ ಆಡಲು ಆರಂಭಿಸಿದರೂ ಸಹ ಬಳಿಕ ರಾಹುಲ್ ಕೂಡ ಕ್ರಿಕೆಟ್ ಅಂಗಳಕ್ಕಿಳಿದಾಗ ಮುಂದೊಮ್ಮೆ ಇಬ್ಬರೂ ಕೂಡ ಭಾರತ ತಂಡದ ಪರ ಆಡಬೇಕೆಂಬ ಕನಸು ಹುಟ್ಟಿಕೊಂಡಿತು. ಕುಟುಂಬದವರೂ ಕೂಡ ಇಬ್ಬರನ್ನೂ ಒಟ್ಟಿಗೆ ತಂಡದಲ್ಲಿ ನೋಡಲು ಇಷ್ಟಪಟ್ಟಿದ್ದರು. ಅಂತೆಯೇ ಈಗ ಕನಸು ನನಸಾಗುವ ಸಮಯ ಬಂದಿದೆ ಎನ್ನುತ್ತಾರೆ ದೀಪಕ್ ಚಹಾರ್.
ಇಬ್ಬರೂ ಕೂಡ ಭಾರತ ತಂಡದಲ್ಲಿ ಆಡಬೇಕೆನ್ನುವುದು ನಮ್ಮ ಹಾಗೂ ಕುಟುಂಬದವರ ಕನಸಾಗಿದೆ. ಇನ್ನು ಐಪಿಎಲ್ನ ಫೈನಲ್ ಪಂದ್ಯದಲ್ಲಿ ನಾನು ಸಹೋದರ ದೀಪಕ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದಾಗ ನನಗೆ ಕೋಪ ಬಂದಿತ್ತು. ಅಲ್ಲದೆ ಡ್ರೆಸ್ಸಿಂಗ್ ರೂಂನಲ್ಲಿ ಕೂಡ ಅಣ್ಣನ ಬೌಲಿಂಗ್ನಲ್ಲಿ ಔಟ್ ಆದೆ ಎಂದು ಎಲ್ಲರೂ ಕಿಚಾಯಿಸಿದ್ದರು. ಅಲ್ಲದೆ, ಬಳಿಕ ಬೌಲಿಂಗ್ ಮಾಡುವಾಗಲೂ ಕೂಡ ನನಗೆ ಸ್ವಲ್ಪ ಕೋಪವಿತ್ತು, ಆದರೆ ಎದುರಾಳಿಗಳಾಗಿ ಆಡುವಾಗ ಅವೆಲ್ಲಾ ಸಾಮಾನ್ಯ ಎಂಬುದು ಯುವ ಆಟಗಾರ ರಾಹುಲ್ ಚಹಾರ್ ಮಾತು.
ಇನ್ನು ನಾವು ಚಿಕ್ಕವರಿದ್ದಾಗ ಮನೆಯ ಪಕ್ಕದಲ್ಲೇ ಕ್ರಿಕೆಟ್ ಆಡುತ್ತಿದ್ದೆವು. ಹೀಗೆ ಆಡುವಾಗ ನಾನು ಎಸೆದ ಬೌಲ್ 9 ವರ್ಷದವನಾಗಿದ್ದ ರಾಹುಲ್ ಎದೆಗೆ ತಗುಲಿತ್ತು, ಆಗ ಆತ ಅಳಲು ಆರಂಭಿಸಿದ್ದ. ಆಗ ಕ್ರಿಕೆಟ್ನಲ್ಲಿ ಇದೆಲ್ಲ ಸಹಜ ಅಂತ ನಾನು ಸಮಜಾಯಿಸಿದ್ದೆ. ಆದ್ರೆ ನಂತರದ ಎಸೆತವೂ ಕೂಡ ಅಪ್ಪಳಿಸಿದಾಗ ಆತನ ಎದೆ ಕೆಂಪಾಗಿತ್ತು, ಅಂದಿನಿಂದಲೂ ಕೂಡ ರಾಹುಲ್ ನನ್ನ ಬೌಲಿಂಗ್ ಆಡಲ್ಲ. ಬೇರೆ ವೇಗದ ಬೌಲರ್ಗಳಿಗೆ ಸರಾಗವಾಗಿ ಆಡುವ ರಾಹುಲ್ ಸಿಕ್ಸರ್ ಕೂಡ ಬಾರಿಸಬಲ್ಲ. ಆದ್ರೆ ನನ್ನ ಬೌಲಿಂಗ್ ಎದುರು ಆಡಲ್ಲ ಎಂದು ದೀಪಕ್ ಹೇಳಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಟಿ-20 ಸರಣಿಗೆ ಸ್ಥಾನ ಪಡೆದಿರುವ ಚಹಾರ್ ಸಹೋದರರು, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.