ವೆಲ್ಲಿಂಗ್ಟನ್: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನ ನೀಡುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಟೀಕಾಕಾರರಿಗೆ ವೇಗಿ ಇಶಾಂತ್ ಶರ್ಮಾ ತಿರುಗೇಟು ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ, ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಹೀಗಾಗಿ ಬುಮ್ರಾ ಬೌಲಿಂಗ್ ಬಗ್ಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಬುಮ್ರಾ ಪ್ರದರ್ಶನದ ಬಗ್ಗೆ ಮಾತನಾಡಿರುವ ವೇಗಿ ಇಶಾಂತ್ ಕೇವಲ ಒಂದು ಇನ್ನಿಂಗ್ಸ್‌ನಿಂದ ಅವರ ಬೌಲಿಂಗ್ ಬಗೆಗಿದ್ದ ದೃಷ್ಟಿಕೋನ ಬದಲಾಗುತ್ತಿರುವುದು ತಮಾಷೆಯಾಗಿದೆ. ಎರಡು ವರ್ಷಗಳಿಂದ ನಾನು, ಬುಮ್ರಾ, ಶಮಿ ಜೊತೆಯಲ್ಲಿ ಜಡೇಜಾ ಅಥವಾ ಅಶ್ವಿನ್ ಸೇರಿ 20 ವಿಕೆಟ್ ಪಡೆದುಕೊಂಡಿದ್ದೇವೆ. ಒಂದು ಇನ್ನಿಂಗ್ಸ್ ಆಧಾರದ ಮೇಲೆ ಜನರು ಪ್ರಶ್ನೆ ಮಾಡುವುದೆಷ್ಟು ಸರಿ ಎಂದಿದ್ದಾರೆ.
ಬುಮ್ರಾ ಸಾಮರ್ಥ್ಯವನ್ನು ಯಾರಾದರೂ ಅನುಮಾನಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರ ಚೊಚ್ಚಲ ಪಂದ್ಯದಿಂದ ಭಾರತ ತಂಡಕ್ಕೆ ನೀಡಿರುವ ಕೊಡುಗೆಯನ್ನ ನೋಡಿದ್ರೆ ಯಾರೂ ಕೂಡ ಯಾವುದೇ ಪ್ರಶ್ನೆಗಳನ್ನು ಎತ್ತಬಾರದು ಎಂದು ಬುಮ್ರಾರನ್ನು ಇಶಾಂತ್ ಸಮರ್ಥಿಸಿಕೊಂಡಿದ್ದಾರೆ.