ಹೈದರಾಬಾದ್:ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಕರಿನೆರಳು ವಿಶ್ವದ ಪ್ರಮುಖ ಕ್ರೀಡಾಕೂಟಗಳ ಮೇಲೆಯೂ ಬಿದ್ದಿದೆ. ಕ್ರಿಕೆಟ್ನ ಶ್ರೀಮಂತ ಟೂರ್ನಿಯಾದ ಐಪಿಎಲ್ ಕೂಡ ಈಗಾಗಲೇ ನಿಗದಿತ ದಿನಾಂಕದಿಂದ ಮುಂದೂಡಲ್ಪಟ್ಟಿದ್ದು, ಬಹುಕೋಟಿ ಆದಾಯ ತರುವ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಬೇರೊಂದು ಸಮಯದಲ್ಲಿ ನಡೆಸಲು ಬಿಸಿಸಿಐ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕೊರೊನಾ ಭೀತಿಯಿಂದ ಮಾರ್ಚ್ 29ರಿಂದ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಆದರೆ ಸದ್ಯದ ವೇಳಾಪಟ್ಟಿಯನ್ನು ರದ್ದುಗೊಳಿಸಿ, ವರ್ಷದ ದ್ವಿತೀಯಾರ್ಧದಲ್ಲಿ 60 ಪಂದ್ಯಗಳನ್ನು ಒಳಗೊಂಡ ಇಡೀ ಪಂದ್ಯಾವಳಿ ನಡೆಸಲು ಬಿಸಿಸಿಐ ಯೋಚಿಸಿದೆ. ಅಲ್ಲದೆ ಭಾರತದಲ್ಲಿ ಸಾಧ್ಯವಾಗದಿದ್ದರೆ, ವಿದೇಶದಲ್ಲಿಯಾದರೂ ಟೂರ್ನಿ ನಡೆಸುವ ಸಾಧ್ಯತೆಯಿದೆ. ಆ ಅವಧಿಯಲ್ಲಿ ಎಲ್ಲ ಆಟಗಾರರು ಭಾಗಿಯಾಗಲು ಸಾಧ್ಯವಾಗದಿದ್ದರೂ ಕೂಡ ಟೂರ್ನಿಯನ್ನ ಕೈಬಿಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
ಕೊರೊನಾ ವೈರಸ್ನಿಂದ ಮುಂದೂಡಲ್ಪಟ್ಟ ಐಪಿಎಲ್ ಮತ್ತೆ ನಡೆಸಲು ಬಿಸಿಸಿಐ ಹೊಸ ಪ್ಲಾನ್? ಆದರೆ ವರ್ಷದ ದ್ವಿತೀಯಾರ್ಧದ ಅಂದರೆ ಜುಲೈ-ಸೆಪ್ಟೆಂಬರ್ ತಿಂಗಳ ಸಮಯದಲ್ಲಿ 6ರಿಂದ 7 ಇತರ ಕ್ರಿಕೆಟ್ ಸರಣಿಗಳು ಈಗಾಗಲೇ ನಿಯೋಜನೆಗೊಂಡಿರುವುದರಿಂದ ಐಪಿಎಲ್ ನಡೆದರೂ ಕೂಡ ಎಲ್ಲ ಆಟಗಾರರೂ ಭಾಗಿಯಾಗುವುದು ಅಸಾಧ್ಯ. ಅಲ್ಲದೆ ಐಪಿಎಲ್ ನಡೆಸುವುದೂ ಕೂಡ ಸುಲಭವಲ್ಲ.
ಏಷ್ಯಾ ಕಪ್-2020 ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಯಲಿದ್ದು, ಇದೇ ತಿಂಗಳಲ್ಲಿ ಇಂಗ್ಲೆಂಡ್ ತವರಿನಲ್ಲಿ ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಭಾಗಿಯಾಗಲಿದೆ. ವರ್ಷದ ದ್ವಿತೀಯಾರ್ಧದಲ್ಲಿ ನ್ಯೂಜಿಲೆಂಡ್ ತಂಡವು ಐರ್ಲೆಂಡ್ ಪ್ರವಾಸ, ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ಗೆ ಹಾಗೂ ದಕ್ಷಿಣ ಆಫ್ರಿಕಾ ಟೀಂ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಮಾತ್ರ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದರಿಂದ, ಈ ತಿಂಗಳಲ್ಲಿ ಐಪಿಎಲ್ ನಡೆದರೆ ಹೆಚ್ಚಿನ ಆಟಗಾರರು ಲಭ್ಯವಾಗಲಿದ್ದಾರೆ.