ಮುಂಬೈ: ಭಾರತ ತಂಡಕ್ಕಾಗಿ ದಶಕಕ್ಕಿಂತ ಹೆಚ್ಚು ಕಾಲ ಆಡಿದ ಕೆಲವು ಆಟಗಾರರಿಗೆ ಬಿಸಿಸಿಐ ವಿದಾಯದ ಪಂದ್ಯ ಏರ್ಪಡಿಸಿಲ್ಲ. ಇದರಿಂದ ಕೋಟ್ಯಂತರ ಅಭಿಮಾನಿಗಳ ಜೊತೆಗೆ ಈಗಾಗಲೇ ನಿವೃತ್ತಿ ಹೊಂದಿರುವ ಯುವರಾಜ್ ಸಿಂಗ್, ಸೆಹ್ವಾಗ್, ಗಂಭೀರ್ ಸಹಿತ ಕೆಲವು ಕ್ರಿಕೆಟಿಗರು ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದಾಗಲೂ ಕೂಡ ಧೋನಿ ನಿವೃತ್ತಿ ಪಂದ್ಯ ಏರ್ಪಡಿಸಬೇಕು ಎಂಬ ಕೂಗು ಕೇಳಿಬಂದಿದೆ. ಬಿಸಿಸಿಐ ಕೂಡ ಧೋನಿಗೆ ವಿದಾಯದ ಪಂದ್ಯವನ್ನು ಆಯೋಜಿಸುವುದು ನಮಗೂ ಗೌರವ ತರಲಿದೆ. ಈ ವಿಚಾರವಾಗಿ ಅವರೊಂದಿಗೆ ಐಪಿಎಲ್ ವೇಳೆ ಮಾತನಾಡಲಿದ್ದೇವೆ ಎಂದು ಹೇಳಿದೆ.
ಇದರ ಬೆನ್ನಲ್ಲೇ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ವಿದಾಯ ಪಂದ್ಯವಿಲ್ಲದೆ ನಿವೃತ್ತಿ ಘೋಷಿಸಿದ ಆಟಗಾರರನ್ನೆಲ್ಲಾ ಒಂದು ತಂಡವಾಗಿ ನಿರ್ಮಿಸುವ ಹೊಸ ಆಲೋಚನೆಯನ್ನು ಹಂಚಿಕೊಂಡಿದ್ದಾರೆ.