ನವದೆಹಲಿ:ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2007 ರಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಾಗ ಬೌಲರ್‌ಗಳನ್ನು ನಿಯಂತ್ರಿಸುತ್ತಿದ್ದರು. ಆದರೆ 2013 ರ ಹೊತ್ತಿಗೆ ಅವರನ್ನು ನಂಬಲು ಶುರು ಮಾಡಿದ್ರು ಮತ್ತು ಹೆಚ್ಚು ಶಾಂತವಾಗಿರುತ್ತಿದ್ದರು ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.
2007 ರ ವಿಶ್ವಕಪ್ ವಿಜೇತ ತಂಡ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಗಳ ಭಾಗವಾಗಿ ಧೋನಿ ನೇತೃತ್ವದಲ್ಲಿ ಆಡಿದ್ದ 35 ವರ್ಷದ ಪಠಾಣ್, ಮಾಹಿ ನಾಯಕತ್ವದ ಕುರಿತು ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
2007 ಮತ್ತು 2013 ರ ನಡುವೆ ಧೋನಿ ನಾಯಕನಾಗಿ ಹೇಗೆ ಬದಲಾದರು ಎಂದು ಕೇಳಿದ್ದಕ್ಕೆ ಉತ್ತರಿಸಿದ ಪಠಾಣ್, 2007 ಮತ್ತು 2013ರಲ್ಲಿ ತಂಡದ ಮೀಟಿಂಗ್ಗಳು ಯಾವಾಗಲೂ ಚಿಕ್ಕದಾಗಿರುತ್ತಿದ್ದವು. 2013ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಕೇವಲ 5 ನಿಮಿಷಗಳ ಕಾಲ ಸಭೆ ನಡೆಸಲಾಗುತ್ತಿತ್ತು ಎಂದಿದ್ದಾರೆ.
ಧೋನಿಯಲ್ಲಿ ಅವರು ಗಮನಿಸಿದ ಒಂದು ಬದಲಾವಣೆಯ ಬಗ್ಗೆ ಮಾತನಾಡುತ್ತಾ, 2007 ರಲ್ಲಿ, ಅವರು ವಿಕೆಟ್ ಕೀಪಿಂಗ್ನಿಂದ ಬೌಲಿಂಗ್ ಅಂತ್ಯದವರೆಗೆ ಉತ್ಸಾಹದಿಂದ ಓಡುತ್ತಿದ್ದರು ಮತ್ತು ಬೌಲರ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಆದರೆ 2013 ರ ಹೊತ್ತಿಗೆ ಬೌಲರ್ಗಳಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಅವಕಾಶ ನೀಡುತ್ತಿದ್ದರು. ಆ ವೇಳೆಗಾಗಲೇ ಮಾಹಿ ತುಂಬಾ ಶಾಂತ ಚಿತ್ತರಾಗಿದ್ದರು ಎಂದು ಪಠಾಣ್ ತಿಳಿಸಿದ್ದಾರೆ.
2007 ಮತ್ತು 2013 ರ ನಡುವೆ ಅವರು ಸ್ಲೋ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳನ್ನು ನಂಬುವ ಅನುಭವ ಪಡೆದರು. ಚಾಂಪಿಯನ್ಸ್ ಟ್ರೋಫಿ ಬರುವ ಹೊತ್ತಿಗೆ, ನಿರ್ಣಾಯಕ ಸಮಯದಲ್ಲಿ ಪಂದ್ಯಗಳನ್ನು ಗೆಲ್ಲಲು ಸ್ಪಿನ್ನರ್‌ಗಳನ್ನು ಬಳಸಿಕೊಳ್ಳಬೇಕು ಎಂಬುದು ಅವರಿಗೆ ಬಹಳ ಸ್ಪಷ್ಟವಾಗಿತ್ತು ಎಂದು ಧೋನಿ ನಾಯಕತ್ವದಲ್ಲಿನ ಬದಲಾವಣೆ ಬಗ್ಗೆ ಪಠಾಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.