ಗ್ರೆನೆಡಾ: ಹಾಲಿ ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಪವರ್ ಪ್ಲೇನ 6 ಓವರ್ಗಳಲ್ಲಿ 93 ರನ್ ಸಿಡಿಸುವ ಮೂಲಕ ಐರ್ಲೆಂಡ್ ವಿಶ್ವದಾಖಲೆ ಬರೆದಿದೆ.
ಬುಧವಾರ ನಡೆದ ಟಿ-20 ಸರಣಿಯಲ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಈ ಸಾಧನೆ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ಮೊದಲ ವಿಕೆಟ್ಗೆ ಬರೋಬ್ಬರಿ 154 ರನ್ಗಳ ಜೊತೆಯಾಟ ನಡೆಸಿತು. ಅನುಭವಿ ಪಾಲ್ ಸ್ಟರ್ಲಿಂಗ್ ಕೇವಲ 47 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 95 ರನ್ ಸಿಡಿಸಿದರೆ, ಮತ್ತೊಬ್ಬರ ಆರಂಭಿಕ ಬ್ಯಾಟ್ಸ್ಮನ್ ಕೆವಿನ್ ಒಬ್ರಿಯಾನ್ 32 ಎಸೆತಗಳಲ್ಲಿ 48 ರನ್ ಸಿಡಿಸಿದರು.
ಈ ಜೋಡಿ 6 ಓವರ್ಗಳ 93 ರನ್ ಸಿಡಿಸುವ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಐರ್ಲೆಂಡ್ಗೂ ಮುನ್ನ 2014ರಲ್ಲಿ ನೆದರ್ಲೆಂಡ್ಸ್ ತಂಡ ಐರ್ಲೆಂಡ್ ವಿರುದ್ಧವೇ 91 ರನ್ಗಳಿಸಿದ್ದು ಇದುವೆರೆಗಿನ ಹೆಚ್ಚು ಪವರ್ಪ್ಲೇ ರನ್ ಆಗಿತ್ತು. ಇದೀಗ ಐರ್ಲೆಂಡ್ ತನ್ನ ಹೆಸರಿಗೆ ಆ ದಾಖಲೆಯನ್ನು ಬರೆದುಕೊಂಡಿದೆ.
ಈ ಪಂದ್ಯದಲ್ಲಿ ಐರ್ಲೆಂಡ್ 20 ಓವರ್ಗಳಲ್ಲಿ 208 ರನ್ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನೆತ್ತಿದ ವೆಸ್ಟ್ ಇಂಡೀಸ್ 204 ರನ್ಗಳಿಸಲಷ್ಟೇ ಶಕ್ತವಾಗಿ 4 ರನ್ಗಳ ರೋಚಕ ಸೋಲುಕಂಡಿತು. ಆಕರ್ಷಕ 95 ರನ್ಗಳಿಸಿದ ಪಾಲ್ ಸ್ಟರ್ಲಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.