ಮುಂಬೈ:ಕೋವಿಡ್-19ನಿಂದ ಕಳೆದ 8 ತಿಂಗಳಿನಿಂದ ಕ್ರೀಡಾ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ ಕಳೆದ 3 ತಿಂಗಳಿನಿಂದ ಹೇಗೋ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳು ಬಯೋಬಬಲ್ ನಿರ್ಮಿಸಿಕೊಂಡು ಕ್ರಿಕೆಟ್ಗೆ ಮರಳಲು ಪ್ರಯತ್ನಿಸುತ್ತಿವೆ.
ಈಗಷ್ಟೇ ಐಪಿಎಲ್ ಮುಗಿಸಿರುವ ಭಾರತ ತಂಡ 2021ರಲ್ಲಿ ಬಿಡುವಿಲ್ಲದೆ ಸರಣಿಗಳನ್ನಾಡಲಿದೆ. 2021ರಲ್ಲಿ ಭಾರತ ತಂಡ ಜನವರಿಯಿಂದ ಡಿಸೆಂಬರ್ವರೆಗೆ ಬರೋಬ್ಬರಿ 14 ಟೆಸ್ಟ್, 16 ಏಕದಿ ಪಂದ್ಯ, 23 ಟಿ-20 ಪಂದ್ಯಗಳನ್ನಾಡಲಿದೆ. ಇದರ ಜೊತೆಗೆ ಜೂನ್ನಲ್ಲಿ ಏಷ್ಯಾ ಕಪ್, ಅಕ್ಟೋಬರ್ನಲ್ಲಿ ಟಿ-20 ವಿಶ್ವಕಪ್, ಮಾರ್ಚ್ನಲ್ಲಿ 2021ರ ಐಪಿಎಲ್ ಆಡಲಿದೆ.
ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನು ಬಿಡುಗಡೆ ಮಾಡಿಲ್ಲವಾದರೂ ಮಂಚೂಣಿ ಕ್ರೀಡಾ ವೆಬ್ಸೈಟ್ ಆಗಿರುವ ಇನ್ಸೈಡ್ ಸ್ಪೋರ್ಟ್ಸ್ ಹಿಂದೆ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಆಧಾರದಲ್ಲಿ ವರದಿ ಪ್ರಕಟಿಸಿದೆ.
2021ರ ಭಾರತ ತಂಡದ ವೇಳಾಪಟ್ಟಿ
ಇಂಗ್ಲೆಂಡ್ ತಂಡಕ್ಕೆ ಭಾರತದಲ್ಲಿ ಆತಿಥ್ಯ
ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬರುವ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ ಜನವರಿಯಲ್ಲಿ ಆತಿಥ್ಯ ನೀಡಲಿದೆ. ಈ ಸುದೀರ್ಘ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4 ಟೆಸ್ಟ್, 4 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನಾಡಲಿದೆ.
ಮಾರ್ಚ್ನಿಂದ ಮೇವರೆಗೆ 2021ರ ಐಪಿಎಲ್
ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಯುತ್ತಿದ್ದಂತೆ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಆಯೋಜನೆ ಮಾಡಲಿದೆ. ಮಾರ್ಚ್ ಕೊನೆಯ ವಾರದಿಂದ ಆರಂಭವಾಗುವ ಮಿಲಿಯನ್ ಡಾಲರ್ ಟೂರ್ನಿ ಮೇನಲ್ಲಿ ಅಂತ್ಯಗೊಳ್ಳಲಿದೆ.
ಸೀಮಿತ ಓವರ್ಗಳ ಸರಣಿ ಮತ್ತು ಏಷ್ಯಾ ಕಪ್ಗಾಗಿ ಶ್ರೀಲಂಕಾ ಪ್ರವಾಸ
ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ಈ ಸರಣಿ ಮುಗಿಯುತ್ತಲೇ ಲಂಕಾದಲ್ಲೇ ಜೂನ್ ಮತ್ತು ಜುಲೈನಲ್ಲಿ ಏಷ್ಯಾ ಕಪ್ ನಡೆಯಲಿದೆ.
ಜುಲೈನಲ್ಲಿ ಭಾರತ ತಂಡದಿಂದ ಜಿಂಬಾಬ್ವೆ ಪ್ರವಾಸ