ಚೆನ್ನೈ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 2 ವಿಕೆಟ್ಗಳ ರೋಚಕ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಮೊದಲ ಪಂದ್ಯದಲ್ಲಿ ಕ್ವಾರಂಟೈನ್ ಸಲುವಾಗಿ ಹೊರಗುಳಿದಿದ್ದ ಕ್ವಿಂಟನ್ ಡಿಕಾಕ್ ಭಾನುವಾರ ಮುಂಬೈ ಬಳಗ ಸೇರಿಕೊಂಡಿದ್ದರು. ಇದೀಗ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದ್ದು, ಆರ್ಸಿಬಿ ವಿರುದ್ಧ ಮುಂಬೈನ ಗರಿಷ್ಠ ಸ್ಕೋರರ್ ಆಗಿದ್ದ ಕ್ರಿಸ್ ಲಿನ್ ಮತ್ತೆ ಬೆಂಚ್ ಕಾಯಬೇಕಾಗಿದೆ.
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ನಾಯಕ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಡಿಕಾಕ್ ಕಣಕ್ಕಿಳಿಯುವುದನ್ನು ಈಗಾಗಲೇ ಮುಂಬೈ ತಂಡದ ನಿರ್ದೇಶಕ ಜಹೀರ್ ಖಾನ್ ಕೂಡ ಖಚಿತಪಡಿಸಿದ್ದಾರೆ.
ಆರ್ಸಿಬಿ ವಿರುದ್ಧ ವಿಫಲರಾಗಿದ್ದ ಮಧ್ಯಮ ಕ್ರಮಾಂಕದ ಪಾಂಡ್ಯ ಸಹೋದರರು ಮತ್ತು ಕೀರನ್ ಪೊಲಾರ್ಡ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮುಂಬೈಗೆ ಗೆಲುವು ಆಸಾಧ್ಯವೇನಲ್ಲ. ಬೌಲಿಂಗ್ ಯುನಿಟ್ ಎಂದಿನಂತೆ ಪ್ರಬಲವಾಗಿದೆ. ಕೆಕೆಆರ್ ಮಣಿಸಿ ಚೊಚ್ಚಲ ಗೆಲುವು ಪಡೆಯಲು ಹಾತೊರೆಯುತ್ತಿದೆ. ಈ ಪಂದ್ಯದಲ್ಲಿ ಅನುಭವಿ ಪಿಯುಷ್ ಚಾವ್ಲಾ ಕಣಕ್ಕಿಳಿಯುವ ಸಾಧ್ಯತೆ ಕೂಡ ಹೆಚ್ಚಿದೆ.