ಮುಂಬೈ: 2021ರಲ್ಲಿ ಆವೃತ್ತಿಯ ಐಪಿಎಲ್ನ ಮೆಗಾ ಹರಾಜು ಪ್ರಕ್ರಿಯೆ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ನಡೆಯುವುದಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.
ಈಗಾಗಲೆ 13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ. ಈಗಾಗಲೇ ಐಪಿಎಲ್ನ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಹೊರಹೋಗಿರುವ ಹಿನ್ನೆಲೆ ಬಿಸಿಸಿಐ ಹೊಸ ಪ್ರಾಯೋಜಕತ್ವದ ಹುಡುಕಾಟದಲ್ಲಿದೆ. ಕೋವಿಡ್ 19 ನಿಂದ ಆರ್ಥಿಕ ಹಿನ್ನಡೆ ಅನುಭವಿಸಿರುವ ಬಿಸಿಸಿಐ 2021ಕ್ಕೆ ನಿಗದಿಯಾಗಿದ್ದ ಮೆಗಾ ಐಪಿಎಲ್ ಆ್ಯಕ್ಷನ್ ಅನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಮಯದ ಅಭಾವ ಇರುವುದರಿಂದ ಹರಾಜು ಪ್ರಕ್ರಿಯೆಯನ್ನು ಕೈಬಿಡಲು ಬಿಸಿಸಿಐ ಯೋಜಿಸುತ್ತಿದೆ. ಈ ಸನ್ನಿವೇಶದಲ್ಲಿ ಎಲ್ಲ ಎಂಟು ಫ್ರಾಂಚೈಸಿಗಳು ತಮ್ಮ ಪ್ರಸ್ತುತ ತಂಡಗಳೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
2020ರ ಐಪಿಎಲ್ ಮತ್ತು 2021ರ ಐಪಿಎಲ್ ನಡುವೆ ಕೇವಲ ನಾಲ್ಕೂವರೆ ತಿಂಗಳ ಅಂತರವಿದೆ. ಮೆಗಾ ಆ್ಯಕ್ಷನ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಲು 4 ರಿಂದ 5 ತಿಂಗಳ ಅವಶ್ಯಕತೆ ಇರುವುದರಿಂದ ಈ ಬಾರಿ ಮೆಗಾ ಆ್ಯಕ್ಷನ್ ನಡೆಯುವುದು ಅನುಮಾನ ಎಂದು ತಿಳಿದು ಬಂದಿದೆ.
ಆದರೆ, ಕೆಲವು ತಂಡಗಳು ತಮಗೆ ಬೇಕಾದ ಆಟಗಾರರನ್ನು ತಂಡಕ್ಕೆ ಸೇರಿಕೊಳ್ಳುವ ಆಲೋಚನೆಯಲ್ಲಿವೆ. ಕಳೆದ ಐಪಿಎಲ್ ಹರಾಜಿನಲ್ಲಿ 332 ಆಟಗಾರರಿದ್ದರು. ಇದರಲ್ಲಿ 73 ಆಟಗಾರರನ್ನು ಖರೀದಿಸುವುದಕ್ಕೆ 8 ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದವು. ಹರಾಜಿನಲ್ಲಿ 62 ಆಟಗಾರರು ಮಾರಾಟವಾಗಿದ್ದರು. ಪ್ಯಾಟ್ ಕಮ್ಮಿನ್ಸ್ ಕೆಕೆಆರ್ ತಂಡಕ್ಕೆ 15.5 ಕೋಟಿ ರೂಗೆ ಮಾರಾಟವಾಗುವ ಮೂಲಕ ಗರಿಷ್ಠ ಬೆಲೆ ಪಡೆದಿದ್ದರು.