ಮುಂಬೈ: ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಶುಕ್ರವಾರದಿಂದ ಆರಂಭವಾಗಲಿರುವ 14ನೇ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಚೆನ್ನೈ ತಲುಪಿದೆ.
ಚೆನ್ನೈನಲ್ಲಿ ಕ್ವಾರಂಟೈನ್ನಲ್ಲಿರುವ ಕುಲ್ದೀಪ್ ಯಾದವ್, ಲೂಕಿ ಫರ್ಗ್ಯುಸನ್ ಮತ್ತು ಪ್ಯಾಟ್ ಕಮ್ಮಿನ್ಸ್ರನ್ನು ಹೊರತುಪಡಿಸಿದ ಉಳಿದೆಲ್ಲಾ ಆಟಗಾರರು ಚಾರ್ಟೆಡ್ ಫ್ಲೈಟ್ ಮೂಲಕ ಮುಂಬೈನಿಂದ ಚೆನ್ನೈಗೆ ಆಗಮಿಸಿದ್ದಾರೆ.
ಕೆಕೆಆರ್ ತಮ್ಮ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಚೆಪಾಕ್ನಲ್ಲಿ ಭಾನುವಾರ ಎದುರಿಸಲಿದೆ. ಇಯಾನ್ ಮಾರ್ಗನ್ ನೇತೃತ್ವದ ತಂಡ ಏಪ್ರಿಲ್ 13ರಂದು ಮುಂಬೈ ಇಂಡಿಯನ್ಸ್ ಮತ್ತು ಏಪ್ರಿಲ್ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈನಲ್ಲಿ ಎದುರಿಸಲಿದೆ.
ಚೆನ್ನೈನಲ್ಲಿ ಮೊದಲ ಹಂತ ಮುಗಿದ ಮೇಲೆ ಫ್ರಾಂಚೈಸಿ ಮುಂಬೈಗೆ ತೆರಳಲಿದೆ. ನಂತರ ಅಹಮದಾಬಾದ್ ಹಾಗೂ ಬೆಂಗಳೂರಿನಲ್ಲಿ 3 ಮತ್ತು 4ನೇ ಹಂತದ ಪಂದ್ಯಗಳನ್ನಾಡಲಿದೆ.
ಕೋವಿಡ್-19 ಸಾಂಕ್ರಾಮಿಕದ ಕಾರಣ ಈ ಬಾರಿ ಯಾವುದೇ ತಂಡಕ್ಕೂ ತವರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಿಲ್ಲ. ಬೆಂಗಳೂರು , ಚೆನ್ನೈ, ಮುಂಬೈ, ಕೋಲ್ಕತ್ತಾ, ಡೆಲ್ಲಿ ಮತ್ತು ಅಹಮದಾಬಾದ್ನಲ್ಲಿ ಎಲ್ಲಾ ಲೀಗ್ ಪಂದ್ಯಗಳು ನಡೆಯಲಿವೆ. ಪ್ಲೇ ಆಫ್ ಪಂದ್ಯಗಳು ಅಹಮದಾಬಾದ್ನಲ್ಲೇ ನಡೆಯಲಿವೆ.