ದುಬೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಶ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಮಂಗಳವಾರ ಎಸ್ಆರ್ಹೆಚ್ ಅವರ ಬದಲಿಗೆ ಆಟಗಾರನನ್ನು ಘೋಷಣೆ ಮಾಡಿದೆ.
ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರನ್ನು ಮಿಚೆಲ್ ಮಾರ್ಶ್ ಅವರ ಬದಲಿ ಆಟಗಾರನಾಗಿ ನೇಮಕ ಮಾಡಲಾಗಿದೆ. ಶೀಘ್ರದಲ್ಲೇ ಅವರು ಎಸ್ಆರ್ಹೆಚ್ ಬಳಗವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೈದರಾಬಾದ್ ಫ್ರಾಂಚೈಸಿ ತಿಳಿಸಿದೆ.
"ಮಿಚೆಲ್ ಗಾಯಕ್ಕೊಳಗಾದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಕೋರುತ್ತೇವೆ. 2020ರ ಐಪಿಎಲ್ನಲ್ಲಿ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಅವರ ಸ್ಥಾನವನ್ನು ತುಂಬಲಿದ್ದಾರೆ" ಎಂದು ಎಸ್ಆರ್ಹೆಚ್ ಟ್ವೀಟ್ ಮಾಡಿದೆ.
ಹೈದರಾಬಾದ್ ತಂಡ ಆರ್ಸಿಬಿ ವಿರುದ್ಧ ಮೊದಲ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ 5ನೇ ಓವರ್ ಎಸೆಯಲು ಬಂದಿದ್ದ ಮಿಚೆಲ್ ಮಾರ್ಶ್ ಹಿಮ್ಮಡಿ ನೋವಿಗೆ ಒಳಗಾಗಿ ಕೇವಲ 4 ಎಸೆತಗಳನ್ನು ಮಾತ್ರ ಎಸೆಯಲು ಶಕ್ತರಾಗಿದ್ದರು. ಬ್ಯಾಟಿಂಗ್ನಲ್ಲೂ 9ನೇ ಕ್ರಮಾಂಕದಲ್ಲಿ ಬಂದು ಯಾವುದೇ ರನ್ಗಳಿಸದೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಇದೀಗ ಮಾರ್ಶ್ ಸರಣಿಯಿಂದ ಹೊರಬೀಳುತ್ತಿದ್ದಂತೆ ಅವರ ಬದಲು ಮುಂದಿನ ಪಂದ್ಯದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ. ಆಲ್ರೌಂಡರ್ ನಬಿಗೆ ಹೈದರಾಬಾದ್ ತಂಡ ಮಣೆ ಹಾಕಲಿದಿಯಾ ಅಥವಾ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್ ಆಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.