ಶಾರ್ಜಾ: ಸಂಜು ಸಾಮ್ಸನ್ ಹಾಗೂ ರಾಹುಲ್ ತೆವಾಟಿಯಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ 224 ರನ್ಗಳ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಮಯಾಂಕ್ ಅಗರ್ವಾಲ್(106) ಅವರ ಶತಕ ಹಾಗೂ ಕೆಎಲ್ ರಾಹುಲ್(69) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 223 ರನ್ಗಳಿಸಿತ್ತು.
224 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಜೋಸ್ ಬಟ್ಲರ್(4) ವಿಕೆಟ್ ಕಳೆದುಕೊಂಡರೂ ದೃತಿಗೆಡದೆ 19.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ನಾಯಕ ಸ್ಟಿವ್ ಹಾಗೂ ಸಾಮ್ಸನ್ ಜೊತೆಗೂಡಿ 2ನೇ ವಿಕೆಟ್ಗೆ 82 ರನ್ಗಳ ಜೊತೆಯಾಟ ನೀಡಿದರು. ಇವರು 27 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 50 ರನ್ಗಳಿಸಿ ಔಟಾದರು. ನಂತರ ಮೂರನೇ ವಿಕೆಟ್ ಒಂದಾದ ಸಂಜು ಸಾಮ್ಸನ್ ಹಾಗೂ ರಾಹುಲ್ ತೆವಾಟಿಯಾ 62 ರನ್ಗಳ ಜೊತೆಯಾಟ ನೀಡಿದರು. ಸಂಜು 42 ಎಸೆತಗಳಲ್ಲಿ ಸಿಡಿಲಬ್ಬರದ 85 ರನ್ಗಳಿಸಿ ಶಮಿ ಬೌಲಿಂಗ್ನಲ್ಲಿ ರಾಹುಲ್ಗೆ ಕ್ಯಾಚ್ ನೀಡಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿಗಳಿದ್ದವು.
ಮೊದಲ 21 ಎಸೆತಗಳಲ್ಲಿ ಕೇವಲ 14 ರನ್ಗಳಿಸಿ ರಾಜಸ್ಥಾನ್ ತಂಡದ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಾಹುಲ್ ತೆವಾಟಿಯಾ 18ನೇ ಓವರ್ನಲ್ಲಿ ಗೇರ್ ಬದಲಿಸಿ ಕಾಟ್ರೆಲ್ರ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ 30 ಕಲೆಯಾಕಿದರು. ಅಲ್ಲಿಯವರೆಗೂ ಪಂಜಾಬ್ ಪರ ಇದ್ದ ಗೆಲುವನ್ನ ಒಂದೇ ಓವರ್ನಲ್ಲಿ ರಾಜಸ್ಥಾನ್ ಕಡೆಗೆ ವಾಲಿಸಿದರು.
ನಂತರ 19ನೇ ಓವರ್ನಲ್ಲಿ ಕೂಡ ರಾಯಲ್ಸ್ 19 ರನ್ ಗಳಿಸಿಕೊಂಡಿತು. ಮೊದಲ ಎಸೆತದಲ್ಲಿ 9 ರನ್ಗಳಿಸಿದ್ದ ಉತ್ತಪ್ಪ ಔಟಾದರು. ಆದರೆ ನಂತರ ಬಂದ ಜೋಫ್ರಾ ಆರ್ಚರ್ ಸತತ ಎರಡು ಸಿಕ್ಸರ್ ಸಿಡಿಸಿ, ಸಿಂಗಲ್ ತೆಗೆದುಕೊಂಡರು. ತೆವಾಟಿಯಾ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಅರ್ಧಶತಕ ಪೂರೈಸಿ ಅದೇ ಓವರ್ನಲ್ಲಿ ಔಟಾದರು. ಗೆಲುವಿಗೆ 12 ಎಸೆತಗಳಲ್ಲಿ 21 ರನ್ ಅಗತ್ಯವಿದ್ದದ್ದು 19 ನೇ ಓವರ್ ಮುಗಿಯುವ ವೇಳೆಗೆ 2 ರನ್ಗೆ ಬಂದು ನಿಂತಿತು. 20 ನೇ ಓವರ್ನಲ್ಲಿ 3 ಎಸೆತವನ್ನು ಬೌಂಡರಿಗಟ್ಟಿದ ಟಾಮ್ ಕರ್ರನ್ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ರಾಜಸ್ಥಾನ್ ರಾಯಲ್ಸ್ 224 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಐಪಿಎಲ್ನಲ್ಲಿ ದಾಖಲೆ ನಿರ್ಮಿಸಿತು. 2008ರಲ್ಲಿ ಇದೇ ತಂಡ ಡೆಕ್ಕನ್ ಚಾರ್ಜಸ್ ಹೈದರಾಬಾದ್ ವಿರುದ್ಧ 215 ರನ್ಗಳನ್ನು ಬೆನ್ನಟ್ಟಿ ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು.
45 ಎಸೆತಗಳಲ್ಲಿ 85 ರನ್ ಸಿಡಿಸಿದ ಸಂಜು ಸಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.