ದುಬೈ: ಟೂರ್ನಿಯಲ್ಲಿ ಸೋಲನ್ನೇ ಕಾಣದೇ ಮುನ್ನುಗ್ಗುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
ಸ್ಟಿವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದಕೊಳ್ಳುತ್ತಾ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ 216 ರನ್ಗಳಿಸಿದ್ದ ಈ ತಂಡ ಎರಡನೇ ಪಂದ್ಯದಲ್ಲಿ ಬರೋಬ್ಬರಿ 224 ರನ್ಗಳ ದಾಖಲೆಯ ಮೊತ್ತವನ್ನು ಬೆನ್ನತ್ತಿ ಜಯ ಸಾಧಿಸಿದೆ.
ಎರಡು ಪಂದ್ಯಗಳಲ್ಲಿ ಸಂಜು ಸಾಮ್ಸನ್, ಸ್ಟಿವ್ ಸ್ಮಿತ್ ಅದ್ಭುತ ಪ್ರದರ್ಶನ ತೋರಿದ್ದರು. ಇವರಿಬ್ಬರ ಜೊತೆಗೆ ಕಳೆದ ಪಂದ್ಯದಲ್ಲಿ ತಂಡ ಸೇರಿಕೊಂಡಿರುವ ಜೋಸ್ ಬಟ್ಲರ್ ಕೂಡ ಸ್ಫೋಟಕ ಬ್ಯಾಟ್ಸ್ಮನ್ ಆಗಿದ್ದು, ತಂಡದ ಬ್ಯಾಟಿಂಗ್ ಲೈನ್ ಅಪ್ ತುಂಬಾ ಸಮತೋಲನದಿಂದ ಕೂಡಿದೆ.
ಆಲ್ರೌಂಡರ್ಗಳ ವಿಭಾಗದಲ್ಲಿ ರಾಹುಲ್ ತೆವಾಟಿಯಾ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇವರ ಜೊತೆಗೆ ಜೋಫ್ರಾ ಆರ್ಚರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಯಾವುದೇ ಬ್ಯಾಟ್ಸ್ಮನ್ಗಿಂತ ಕಡಿಮೆಯೇನಿಲ್ಲ ಎಂಬುದು ಸಾಬೀತಾಗಿದೆ. ಇವರ ಜೊತೆಗೆ ಉಳಿದ ಬೌಲರ್ಗಳು ರನ್ಗತಿಗೆ ಕಡಿವಾಣ ಹಾಕಿದರೆ ತಂಡಕ್ಕೆ 3ನೇ ಗೆಲುವು ಕೂಡ ದೊಡ್ಡದೇನಲ್ಲ. ಹಾಗಾಗಿ ಈ ಪಂದ್ಯದಲ್ಲೂ ಆರ್ ಆರ್ ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗುವುದು ಅನುಮಾನವಾಗಿದೆ.
ಇನ್ನು ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿ ಮುಂಬೈ ವಿರುದ್ಧ 49 ರನ್ಗಳ ಸೋಲು ಕಂಡಿದ್ದ ಕೆಕೆಆರ್ನ ಎರಡನೇ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಉತ್ತಮ ರೀತಿಯಲ್ಲಿ ಕಮ್ಬ್ಯಾಕ್ ಮಾಡಿತ್ತು.
ಆರಂಭಿಕ ಆಟಗಾರ ಶುಬ್ಮನ್ ಗಿಲ್ 70 ರನ್ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇನ್ನು ತಂಡದಲ್ಲಿ ಬಲ ಮತ್ತು ಎಡ ಬ್ಯಾಟಿಂಗ್ ಸಂಯೋಜನೆ ಉತ್ತಮವಾಗಿದೆ. ಮಾರ್ಗನ್ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿದ್ದು, ಕೆಕೆಆರ್ಗೆ ಸುಲಭ ಗೆಲುವು ತಂದುಕೊಟ್ಟಿದ್ದರು. ಇನ್ನು ತಂಡದಲ್ಲಿ ನಿತೀಶ್ ರಾಣಾ, ಕಾರ್ತಿಕ್ ಜೊತೆಗೆ ಸ್ಫೋಟಕ ಆಟಗಾರರಾದ ರಸೆಲ್ ಹಾಗೂ ನರೈನ್ ಅವರಂತಹ ಆಲ್ರೌಂಡರ್ ಇರುವುದರಿಂದ ತಂಡ ಟೂರ್ನಿಯಲ್ಲೇ ಬಲಿಷ್ಠ ತಂಡವಾಗಿದೆ.