ಮುಂಬೈ:ವೇಗಿ ಲಸಿತ್ ಮಾಲಿಂಗ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತಾವು ಲಭ್ಯವಿರುವುದಿಲ್ಲ ಎಂದು ಇಂದು ತಿಳಿಸಿದ್ದಾರೆ. ಅವರ ಬದಲಿಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವುದಾಗಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ತಿಳಿಸಿದೆ.
ಐಪಿಎಲ್‌ನ 13ನೇ ಆವೃತ್ತಿ ಯುಎಇಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮಾಲಿಂಗ ಶ್ರೀಲಂಕಾದಲ್ಲಿ ತಮ್ಮ ಕುಟುಂಬದ ಜತೆಯಿರಲು ಬಯಸಿರುವುದರಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮುಂಬೈ ಇಂಡಿಯನ್ಸ್ ತಿಳಿಸಿದೆ.
ಮಾಲಿಂಗ ಬದಲಿಗೆ ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನೊಂದು ವಾರದಲ್ಲಿ ಅವರು ಯುಎಇಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜೇಮ್ಸ್ ನಮಗೆ ಸೂಕ್ತ ಬೌಲರ್ ಆಗಿದ್ದಾರೆ. ಈ ಬಾರಿ ಟೂರ್ನಿ ಯುಎಇನಲ್ಲಿ ನಡೆಯುತ್ತಿರುವುದರಿಂದ ನಮಗೆ ಅವರು ಉತ್ತಮ ಆಯ್ಕೆಯಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ ತಿಳಿಸಿದ್ದಾರೆ.
ಮಾಲಿಂಗ ಕುರಿತು ಮಾತನಾಡಿರುವ ಅವರು " ಲಸಿತ್ ಮಾಲಿಂಗ ಒಂದು ದಂತಕಥೆಯಾಗಿದ್ದಾರೆ. ಅವರು ಹಲವು ಆವೃತ್ತಿಗಳಿಂದ ನಮ್ಮ ತಂಡದ ಆಧಾರಸ್ತಂಭವಾಗಿದ್ದರು. ಆದರೆ ಈ ಋತುವಿನಲ್ಲಿ ಅವರನ್ನು ನಾವು ಖಂಡಿತಾ ಮಿಸ್ ಮಾಡಿಕೊಳ್ಳಲಿದ್ದೇವೆ. ಆದಾಗ್ಯೂ ಕುಟುಂಬದ ಜೊತೆಯಿರಲು ಅವರು ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ" ಎಂದು ತಿಳಿಸಿದ್ದಾರೆ.
2008ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಮಾಲಿಂಗ, ಶ್ರೀಮಂತ ಕ್ರಿಕೆಟ್ ಲೀಗ್ನ ಇತಿಹಾಸದಲ್ಲೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅವರು 122 ಪಂದ್ಯಗಳಿಂದ 170 ವಿಕೆಟ್ ಪಡೆದಿದ್ದರು.