ದುಬೈ: ಜೈವಿಕ ಸುರಕ್ಷಿತ ವಲಯ(ಬಯೋ ಸೆಕ್ಯೂರ್)ದೊಳಗಿನ ಜೀವನ ಸುಲಭವಲ್ಲ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂಬರುವ ಆವೃತ್ತಿಯು ವಿಭಿನ್ನವಾಗಿರುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ ನ ಜಯದೇವ್ ಉನಾದ್ಕತ್ ಒಪ್ಪಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಆಗಸ್ಟ್ 21ರಂದು ಯುಎಇಗೆ ತಲುಪಿತ್ತು. ನಂತರ ಅಲ್ಲಿ 6 ದಿನಗಳ ಕ್ವಾರಂಟೈನ್ ಮುಗಿಸಿ 3 ಕೋವಿಡ್ 19 ಪರೀಕ್ಷೆಗಳನ್ನು ಎದುರಿಸಿ, ಅದರಲ್ಲಿ ನೆಗೆಟಿವ್ ವರದಿ ಬಂದ ನಂತರ ಐಪಿಎಲ್ ತರಬೇತಿ ಆರಂಭಿಸಿತ್ತು.
ಐಪಿಎಲ್ ಈ ಬಾರಿ ಹಿಂದಿನ ಆವೃತ್ತಿಗಳಿಗಿಂತ ವಿಭಿನ್ನವಾಗಿರುತ್ತದೆ. ಸ್ಟೇಡಿಯಂನಲ್ಲಿ ಅಭಿಮಾನಿಗಳಿರುವುದಿಲ್ಲ. ನಾವೂ ಟೂರ್ನಿ ಮುಗಿಯುವವರೆಗೂ ಬಯೋ ಸೆಕ್ಯೂರ್ ವಲಯಗಳಲ್ಲೇ ಉಳಿಯಬೇಕಿರುತ್ತದೆ. ಆದರೆ ಐಪಿಎಲ್ ಈ ಸಮಯದಲ್ಲೂ ಕ್ರಿಕೆಟ್ ಆಡಲು ನಮಗೆ ಸಿಕ್ಕಿರುವ ಒಂದು ವರದಾನವಾಗಿದೆ ಮತ್ತು ನಾನು ನಿಜವಾಗಿಯೂ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದೇನೆ ಎಂದು ಉನಾದ್ಕಟ್ ತಿಳಿಸಿದ್ದಾರೆ.
ಬಯೋ ಬಬಲ್ ಬಗ್ಗೆ ಮಾತನಾಡುತ್ತಾ, ಪ್ರಮಾಣಿಕವಾಗಿ ಹೇಳುತ್ತೇನೆ ಇಲ್ಲಿ ಜೀವನ ಅಷ್ಟು ಸುಲಭದಲ್ಲ. ಆದರೆ ನಾವು ಪ್ರೀತಿಸುವ ಕ್ರಿಕೆಟ್ ಆಡುವ ಅವಕಾಶವನ್ನು ಪಡೆದಿದ್ದೇವೆ. ಹಾಗಾಗಿ ಇದರ ಬಗ್ಗೆ ಯಾವುದೇ ದೂರುಗಳಿಲ್ಲ. ನಾವು ಅನುಸರಿಸಲು ಸಾಕಷ್ಟು ಪ್ರೋಟೋಕಾಲ್ಗನ್ನು ಹೊಂದಿದ್ದೇವೆ. ನಾವು ಅದನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಸೌರಾಷ್ಟ್ರ ತಂಡವನ್ನು ಮುನ್ನಡೆಸಿ ರಣಜಿ ಟ್ರೋಫಿ ತಂದುಕೊಟ್ಟಿದ್ದ ಉನಾದ್ಕಟ್ ಫೈನಲ್ ಸೇರಿದಂತೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು 2019ರ ಆವೃತ್ತಿಯ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಎಂದಿನ ಪ್ರದರ್ಶನವನ್ನು ಕಾಯ್ದುಕೊಂಡು ತಂಡಕ್ಕೆ ನೆರವಾಗುವ ವಿಶ್ವಾಸದಲ್ಲಿದ್ದಾರೆ.
53 ದಿನಗಳ ಟೂರ್ನಮೆಂಟ್ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ಸೆಪ್ಟೆಂಬರ್ 22ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.