ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ ಅದ್ಭುತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ ತಂಡದ ವೇಗದ ಬೌಲರ್ ಕಗಿಸೋ ರಬಾಡ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದು, ಪರ್ಪಲ್ ಕ್ಯಾಪ್ ಮರಳಿ ಪಡೆದುಕೊಂಡಿದ್ದಾರೆ.
ಆರ್ಸಿಬಿ ವಿರುದ್ಧ 4 ವಿಕೆಟ್: ಪರ್ಪಲ್ ಕ್ಯಾಪ್ ಮರಳಿ ಪಡೆದ ಡೆಲ್ಲಿ ತಂಡದ ರಬಾಡ - Kagiso Rabada reclaims Purple Cap
ಸೋಮವಾರ ಆರ್ಸಿಬಿ ಸೋಲಿಗೆ ಕಾರಣರಾಗಿದ್ದ ಡೆಲ್ಲಿ ತಂಡದ ಬೌಲರ್ ಕಗಿಸೋ ರಬಾಡ ಪರ್ಪಲ್ ಕ್ಯಾಪ್ ಮರಳಿ ಪಡೆದಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರಾಹುಲ್ ಆರೆಂಜ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಬೌಲರ್ ಯಜುವೇಂದ್ರ ಚಹಾಲ್ ಟೂರ್ನಿಯಲ್ಲಿ 8 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು. ಆದರೆ ನಿನ್ನೆ ಆರ್ಸಿಬಿ ವಿರುದ್ಧ 59 ರನ್ಗಳ ಗೆಲುವಿಗೆ ಕಾರಣನಾದ ಕಗಿಸೊ ರಬಾಡ ಟೂರ್ರಿಯಲ್ಲಿ 12 ವಿಕೆಟ್ಗಳೊಡನೆ ಪರ್ಪಲ್ ಕ್ಯಾಪ್ ಮರಳಿ ಪಡೆದಿದ್ದಾರೆ. ರಬಾಡ ಅವರನ್ನು ಹೊರತು ಪಡಿಸಿದರೆ, ಚಹಾಲ್ 8, ಶಮಿ 8 ಹಾಗೂ ಟ್ರೆಂಟ್ ಬೌಲ್ಟ್ ಕೂಡ 8 ವಿಕೆಟ್ ಪಡೆದಿದ್ದಾರೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ 302 ರನ್ಗಳಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. 5 ಪಂದ್ಯಗಳಿಂದ 282 ರನ್ಗಳಿಸಿರುವ ಚೆನ್ನೈ ತಂಡದ ಫಾಫ್ ಡು ಪ್ಲೆಸಿಸ್ 2ನೇ ಸ್ಥಾನದಲ್ಲಿದ್ದರೆ, ಪಂಜಾಬ್ ತಂಡದ ಮಯಾಂಕ್ ಅಗರ್ವಾಲ್ 272 ರನ್ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.