ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗುತ್ತಿದ್ದು, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಶ್ರೇಯಸ್ ಪಡೆ ಬಲಿಷ್ಠ ರೋಹಿತ್ ಶರ್ಮಾ ಪಡೆಗೆ ಟಾಂಗ್ ನೀಡಲು ಸಜ್ಜಾಗಿದೆ.
ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ. 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಇದೇ ಮೊದಲ ಭಾರಿಗೆ ಫೈನಲ್ ಪ್ರವೇಶ ಪಡೆದುಕೊಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಈಗಾಗಲೇ ನಾಲ್ಕು ಸಲ ಟ್ರೋಫಿಗೆ ಮುತ್ತಿಕ್ಕಿದ್ದು, ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಇರಾದೆ ಹೊಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮಬಲ ಹೊಂದಿದ್ದು, ತಂಡಕ್ಕೆ ಸ್ಟೋನಿಸ್ ಆಧಾರ ಸ್ತಂಭವಾಗಿದ್ದಾರೆ. ಶಿಖರ್ ಧವನ್ ಫಾರ್ಮ್ನಲ್ಲಿರುವುದು ತಂಡಕ್ಕೆ ಮತ್ತಷ್ಟು ಬಲ ನೀಡಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಹೆಟ್ಮಾಯರ್, ಪಟೇಲ್, ರಹಾನೆ, ರಿಷಭ್ ಪಂತ್ ಮಿಂಚು ಹರಿಸಬೇಕಾದ ಅನಿವಾರ್ಯತೆ ಇದೆ.
ಇನ್ನು ಮುಂಬೈ ಇಂಡಿಯನ್ಸ್ನಲ್ಲಿ ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್ ಮುಂದುವರೆದಿದ್ದು, ಉಳಿದಂತೆ ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್, ಪೋಲಾರ್ಡ್ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಬುಮ್ರಾ, ಬೌಲ್ಟ್ ಎದುರಾಳಿ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ - ಡೆಲ್ಲಿ 27 ಸಲ ಮುಖಾಮುಖಿಯಾಗಿದ್ದು, 15ರಲ್ಲಿ ರೋಹಿತ್ ಪಡೆ ಗೆಲುವು ದಾಖಲು ಮಾಡಿದ್ದು, ಡೆಲ್ಲಿ 12 ಪಂದ್ಯ ಗೆದ್ದಿದೆ.
ಸಂಭವನೀಯ ತಂಡಗಳು ಇಂತಿವೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ಕ್ಯಾಪ್ಟನ್), ಕ್ವಿಂಟನ್ ಡಿಕಾಕ್(ವಿ.ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಿರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಂಟರ್ ನೇಲ್, ಬೌಲ್ಟ್, ಜಸ್ಪ್ರೀತ್ ಬುಮ್ರಾ, ಸೌರಭ್ ತಿವಾರಿ, ರಾಹುಲ್ ಚಹಾರ್
ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ರಿಷಭ್ ಪಂತ್(ವಿ,ಕೀ), ಶಿಖರ್ ಧವನ್, ಮಾರ್ಕಸ್ ಸ್ಟೋನಿಸ್, ರಹಾನೆ, ಶಿಮ್ರಾನ್ ಹೆಟ್ಮಾಯರ್, ಅಕ್ಸರ್ ಪಟೇಲ್, ಆರ್.ಅಶ್ವಿನ್, ಕಾಗಿಸೋ ರಬಾಡ, ಪ್ರವೀಣ್ ದುಬೆ, ಪೃಥ್ವಿ ಶಾ,ಅಲೆಕ್ಸ್ ಕ್ಯಾರಿ