ದುಬೈ :ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿರುವ ಯುವ ಆಟಗಾರ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಮೆರೆಯುತ್ತಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಇಂದಿನ ಫೈನಲ್ ಪಂದ್ಯದಲ್ಲಿ ಎದುರಿಸುತ್ತಿದೆ.
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯಾರ್ಧದಲ್ಲಿ ಮಂಕಾಗಿತ್ತು. ಆದರೆ, ಮತ್ತೆ ಕೊನೆಯ ಲೀಗ್ ಹಾಗೂ 2ನೇ ಕ್ವಾಲಿಫೈಯರ್ನಲ್ಲಿ ತಿರುಗಿ ಬಿದ್ದು ಆರ್ಸಿಬಿ ಮತ್ತು ಸನ್ರೈಸರ್ಸ್ ತಂಡವನ್ನು ಮಣಿಸಿ 2ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿತ್ತು.
ಆದರೆ, ಕ್ವಾಲಿಫೈಯರ್ ಪಂದ್ಯದಲ್ಲಿ ಪವರ್‌ಫುಲ್ ತಂಡವಾದ ಮುಂಬೈ ವಿರುದ್ಧ ಮಕಾಡೆ ಮಲಗಿತ್ತು. ಸೋಲಿನಿಂದ ಹಿಂಜರಿಯದ ಡೆಲ್ಲಿ ಮತ್ತೆ 2ನೇ ಕ್ವಾಲಿಫೈಯರ್ನಲ್ಲಿ ಸನ್ರೈಸರ್ಸ್ ವಿರುದ್ಧ ಅಚ್ಚರಿಯ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಫೈನಲ್ ಕಾದಾಟದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಸವಾಲನ್ನು ಸ್ವೀಕರಿಸಿ ಟ್ರೋಫಿ ಎತ್ತಿ ಹಿಡಿಯಲು ಡೆಲ್ಲಿ ತಂಡಕ್ಕೆ ನೆರವಾಗಬಹುದಾದ ಟಾಪ್ 5 ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..
ಕಗಿಸೋ ರಬಾಡ
ದಕ್ಷಿಣ ಆಫ್ರಿಕಾ ಯುವ ಬೌಲರ್ ರಬಾಡ ಟೂರ್ನಿಯ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ವಿಭಾಗದ ಆಧಾರ ಸ್ತಂಭವಾಗಿದ್ದಾರೆ. 13ನೇ ಆವೃತ್ತಿಯಲ್ಲಿ 16 ಪಂದ್ಯಗಳಿಂದ 28 ವಿಕೆಟ್ ಪಡೆದಿರುವ ರಬಾಡ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಹಾಗಾಗಿ, ಈ ಪಂದ್ಯದಲ್ಲಿ ರಬಾಡ ಪ್ರದರ್ಶನದ ಮೇಲೆ ಡೆಲ್ಲಿ ತಂಡದ ಕನಸು ನಿಂತಿದೆ.
ಶಿಖರ್ ಧವನ್
ಭಾರತ ತಂಡದ ಎಡಗೈ ಆಟಗಾರ ಶಿಖರ್ ಧವನ್ ಟೂರ್ನಿಗೂ ಮೊದಲು ಭಾರತ ತಂಡದಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ, ಐಪಿಎಲ್ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದಾರೆ. ಅವರು ಟೂರ್ನಿಯಲ್ಲಿ ಸತತ 2 ಶತಕ ಸಿಡಿಸಿರುವುದೇ ಇದಕ್ಕೇ ಸಾಕ್ಷಿ.
ಧವನ್ ಟೂರ್ನಿಯಲ್ಲಿ 145.65 ಸ್ಟ್ರೈಕ್ರೇಟ್ನಲ್ಲಿ 603 ರನ್ ಸಿಡಿಸಿದ್ದು, ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ 78 ರನ್ಗಳಿಸಿ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದ್ದರು. ಇಂದಿನ ಪಂದ್ಯದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.
ಮಾರ್ಕಸ್ ಸ್ಟೋಯ್ನಿಸ್
ಡೆಲ್ಲಿ ತಂಡ ಫೈನಲ್ ಪ್ರವೇಶಿಸಿರುವುದರ ಹಿಂದಿನ ಬಹುಪಾಲು ಯಶಸ್ಸು ಸ್ಟೋಯ್ನಿಸ್ಗೆ ಸಲ್ಲುತ್ತದೆ. ಅವರು ಬ್ಯಾಟಿಂಗ್ನಲ್ಲಿ 352 ಹಾಗೂ ಬೌಲಿಂಗ್ನಲ್ಲಿ 12 ವಿಕೆಟ್ ಪಡೆದು ಡೆಲ್ಲಿ ತಂಡಕ್ಕೆ ಕೆಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಆವೃತ್ತಿ ಅವರ ಐಪಿಎಲ್ನ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಶ್ರೇಷ್ಠವಾಗಿದೆ.
ಪ್ಲೇಆಫ್ ಪಂದ್ಯದಲ್ಲಿ ಆರಂಭಿಕನಾಗಿ ಯಶಸ್ವಿಯಾಗಿರುವುದರಿಂದ ಇಂದಿನ ಪಂದ್ಯದಲ್ಲೂ ಸ್ಟೋಯ್ನಿಸ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಸ್ಟೋಯ್ನಿಸ್ 38ರನ್ ಹಾಗೂ 3 ವಿಕೆಟ್ ಪಡೆದಿದ್ದರು.
ಶ್ರೇಯಸ್ ಅಯ್ಯರ್
ಡೆಲ್ಲಿ ಪರ ಶಿಖರ್ ಧವನ್ ಹೊರೆತುಪಡಿಸಿದರೆ ಹೆಚ್ಚು ರನ್ಗಳಿಸಿರುವ ಪಟ್ಟಿಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಇದ್ದಾರೆ. ಅವರು 16 ಪಂದ್ಯಗಳಲ್ಲಿ 454 ರನ್ಗಳಿಸಿದ್ದಾರೆ. ಬುಮ್ರಾ, ಬೌಲ್ಟ್ ಅಂತಹ ಪೇಸರ್ಗಳ ವಿರುದ್ಧ ರನ್ಗಳಿಸಿಲು ಸುಲಭವಲ್ಲದಿದ್ದರೂ, ಸ್ಪಿನ್ನರ್ಗಳ ವಿರುದ್ಧ ಅಯ್ಯರ್ ದಾಖಲೆ ಚೆನ್ನಾಗಿರುವುದರಿಂದ ಇವರಿಂದ ಉತ್ತಮ ರನ್ ನಿರೀಕ್ಷಿಸಬಹುದಾಗಿದೆ.
ಎನ್ರಿಚ್ ನೋಕಿಯಾ
ದಕ್ಷಿಣ ಅಫ್ರಿಕಾ ಎನ್ರಿಚ್ ನೋಕಿಯಾ ಡೆಲ್ಲಿ ತಂಡದಲ್ಲಿ ತೆರೆಮರೆ ಕಾಯಿಯಂತೆ ಮಿಂಚುತ್ತಿದ್ದಾರೆ. ಅವರು ರಬಾಡರ ಜೊತೆ ವೇಗದ ಬೌಲಿಂಗ್ನಲ್ಲಿ ಡೆಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಎನ್ರಿಚ್15 ಪಂದ್ಯಗಳಲ್ಲಿ 20 ವಿಕೆಟ್ಸ್ ಉಡಾಯಿಸಿದ್ದಾರೆ. ಇದೇ ಮೊದಲ ಐಪಿಎಲ್ ಆದರೂ ಅದ್ಭುತ ಪ್ರದರ್ಶನ ತೋರಿರುವ ನೋಕಿಯಾ ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ.