ದುಬೈ: ಡೆಲ್ಲಿ ತಂಡದ ಮಂಚೂಣಿ ಬೌಲರ್ ಅಮಿತ್ ಮಿಶ್ರಾ 13ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಶ್ರಾ ಕೇವಲ 2 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು.
ಕೆಕೆಆರ್ ವಿರುದ್ಧ ಶನಿವಾರ ನಡೆದಿದ್ದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಚೆಂಡನ್ನು ತಡೆಯುವ ವೇಳೆ ಗಂಭೀರ ಗಾಯವಾಗಿತ್ತು.
ಎಎನ್ಐ ಜೊತೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧಿಕಾರಿ ಮಾತನಾಡಿದ್ದು , ಅಮಿತ್ ಮಿಶ್ರಾ ಅವರಿಗೆ ಬೆರಳಿನ ನರಕ್ಕೆ ಪೆಟ್ಟು ಬಿದ್ದಿರುವುದು ಖಚಿತವಾಗಿದೆ ಎಂದಿದ್ದಾರೆ.
ಮಿಶ್ರಾ ವೈದ್ಯಕೀಯ ವರದಿ ಬಂದಿದೆ. ಅದು ತಂಡಕ್ಕೆ ಕೆಟ್ಟ ಸುದ್ದಿಯಾಗಿದೆ. ಅವರು ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಅವರ ಬದಲಿ ಆಟಗಾರನಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಆದರೆ ಕೆಟ್ಟ ವಿಷಯವೆಂದರೆ ಅವರು ಉತ್ತಮ ಲಯದಲ್ಲಿದ್ದರು, ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಯುಎಇ ವಾತಾವರಣದಲ್ಲಿ ಅವರ ಅನುಭವ ತಂಡದಲ್ಲಿ ಪ್ರಮುಖವಾಗಿತ್ತು. ಆದರೂ ತಂಡದಲ್ಲಿ ಯುವ ಸ್ಪಿನ್ನರ್ಗಳಿರುವುದೇ ನಮಗೆ ಸಮಾಧಾನ ಎಂದಿದ್ದಾರೆ.
ವೇಗದ ಬೌಲರ್ಗಳೇ ಬೌಲಿಂಗ್ ಮಾಡಲು ಹಿಂಜರಿಯುತ್ತಿದ್ದ ಶಾರ್ಜಾದಂಥ ಮೈದಾನದಲ್ಲಿ ಮಿಶ್ರಾ ಉತ್ತಮ ರಿದಮ್ ಕಂಡುಕೊಂಡಿದ್ದರು. ಅವರು ಚಿಕ್ಕ ಕ್ರೀಡಾಂಗಣದ ಹೊರತಾಗಿಯೂ ಶುಬ್ಮನ್ ಗಿಲ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಇದೀಗ ಅವರ ಅನುಪಸ್ಥಿತಿ ಖಂಡಿತ ಡೆಲ್ಲಿ ತಂಡಕ್ಕೆ ಕಾಡಲಿದೆ.