ಕೋಲ್ಕತ್ತಾ: ಡಿಸೆಂಬರ್ 19ರಂದು ನಡೆಯುವ ಐಪಿಎಲ್ನ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 338ಆಟಗಾರರಿದ್ದು, ಇದರಲ್ಲಿ ಕೇವಲ 73 ಆಟಗಾರರು ಮಾತ್ರ 8 ಪ್ರಾಂಚೈಸಿಗಳು ಕೊಂಡುಕೊಳ್ಳಬಹುದಾಗಿದೆ.
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುವ ಅವಕಾಶಕ್ಕಾಗಿ ದೇಶ ವಿದೇಶದ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈಗಾಗಲೆ 900 ಕ್ಕೂ ಹೆಚ್ಚಿದ್ದ ಆಟಗಾರರ ಪಟ್ಟಿಯನ್ನು 338 ಕ್ಕೆ ಸೀಮಿತಗೊಳಿಸಲಾಗಿದೆ. ಅದರಲ್ಲೂ ಕೆಲವು ವಿದೇಶಿ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಐಪಿಎಲ್ ಪ್ರಾಂಚೈಸಿಗಳು ಹಾತೊರೆಯುತ್ತಿವೆ. ಅಂತಹ ಆಟಗಾರರ ವಿವರ ಇಲ್ಲಿದೆ.
ಪ್ಯಾಟ್ ಕಮ್ಮಿನ್ಸ್(2 ಕೋಟಿ)
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 2017ರಲ್ಲಿ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಆ ಆವೃತ್ತಿಯಲ್ಲಿ 15 ವಿಕೆಟ್ ಪಡೆದಿದ್ದ ಕಮ್ಮಿನ್ಸ್ 2018ರಲ್ಲಿ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಯಿತು. 2019ರ ಆವೃತ್ತಿಯಲ್ಲಿ ವಿಶ್ವಕಪ್ ಇದ್ದಿದ್ದರಿಂದ ಅವರು ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ 2020ಕ್ಕೆ ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದು ಭರ್ಜರಿ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ.
ಗ್ಲೇನ್ ಮ್ಯಾಕ್ಸ್ವೆಲ್(2 ಕೋಟಿ)
ಟಿ20 ಕ್ರಿಕೆಟ್ಗೆ ಹೇಳಿಮಾಡಿಸಿದಂತಿರುವ ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ 2019ರಲ್ಲಿ ಆವೃತ್ತಿಯಿಂದ ಹೊರಗುಳಿದಿದ್ದರು. ಈಗಾಗಲೆ ಐಪಿಎಲ್ನಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿರುವ ಮ್ಯಾಕ್ಸ್ವೆಲ್ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ಸಾಂದರ್ಭಿಕ ಸ್ಪಿನ್ ಬೌಲರ್ ಆಗಿದ್ದಾರೆ. ಟಿ20 ಕ್ರಿಕಟ್ನಲ್ಲಿ 150 ಸ್ಟ್ರೈಕ್ ರೇಟ್ ಹೊಂದಿರುವ ಇವರು ಹರಾಜು ಪ್ರಕ್ರಿಯೆಯ ಕೇಂದ್ರಬಿಂದುವಾಗಲಿದ್ದಾರೆ. ಇವರು ಡೆಲ್ಲಿ, ಪಂಜಾಬ್, ಮುಂಬೈ ಪ್ರಾಂಚೈಸಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ.