ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ನಲ್ಲಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ್ಯರೋನ್ ಫಿಂಚ್ (52), ದೇವದತ್ ಪಡಿಕ್ಕಲ್(55) ಹಾಗೂ ಎಬಿ ಡಿ ವಿಲಿಯರ್ಸ್(54) ಹಾಗೂ ಶಿವಂ ದುಬೆ(27) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಕಳೆದುಕೊಂಡು 201 ರನ್ಗಳಿಸಿತ್ತು. ಮುಂಬೈ ಕೂಡ 20 ಓವರ್ಗಳಲ್ಲಿ 201 ರನ್ಗಳಿಸಿ ಟೈ ಸಾಧಿಸಿತು. ಆದರೆ ಸೂಪರ್ ಓವರ್ನಲ್ಲಿ ಆರ್ಸಿಬಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಬೆಂಗಳೂರು ನೀಡಿದ 202 ರನ್ಗಳ ಬೆನ್ನತ್ತಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೇವಲ 39 ರನ್ಗಳಿಸುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ(8) 2ನೇ ಓವರ್ನಲ್ಲೇ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಬದಲಿ ಫೀಲ್ಡರ್ ಪವನ್ ನೇಗಿಗೆ ಕ್ಯಾಚ್ ನೀಡಿ ಔಟಾದರು.
ರೋಹಿತ್ ಶರ್ಮಾ ನಂತರ ಬಂದ ಸೂರ್ಯಕುಮಾರ್ ಯಾದವ್ ಖಾತೆ ತೆರೆಯುವ ಮುನ್ನವೇ ಉದಾನ ಬೌಲಿಂಗ್ನಲ್ಲಿ ವಿಲಿಯರ್ಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇವರ ಬೆನ್ನಲ್ಲೇ 14 ರನ್ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಕೂಡ ಚಹಾಲ್ ಬೌಲಿಂಗ್ನಲ್ಲಿ ನೇಗಿಗೆ ಕ್ಯಾಚ್ ನೀಡಿದರು.
ಆದರೆ ಇಂದೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ(15) ಜೊತೆಗೂಡಿ 4 ವಿಕೆಟ್ಗೆ 39 ರನ್ ಜೊತೆಯಾಟ ನೀಡಿ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ಪಾಂಡ್ಯ ಕೇವಲ 15 ರನ್ಗಳಿಗೆ ಜಂಪಾ ಓವರ್ನಲ್ಲಿ ನೇಗಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.