ಅಬುಧಾಬಿ:ಸಿಪಿಎಲ್ ಮುಗಿಯುತ್ತಿದ್ದಂತೆ ಯುಎಇಗೆ ಆಗಮಿಸಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು ಹೋಟೆಲ್ನಲ್ಲಿ 6 ದಿನಗಳ ಕ್ವಾರಂಟೈನ್ ಅವಧಿ ಆರಂಭಿಸಿದ್ದಾರೆ.
ಗುರುವಾರ ಕೆರಿಬಿಯನ್ ಲೀಗ್ ಮುಕ್ತಾಯಗೊಂಡಿದೆ. ಕೀರನ್ ಪೊಲಾರ್ಡ್ ನೇತೃತ್ವದ ಟ್ರಿಂಬಾಗೋ ನೈಟ್ರೈಡರ್ಸ್ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. ಟೂರ್ನಿ ಮುಗಿಯುತ್ತಿದ್ದಂತೆ ವಿಂಡೀಸ್ ಕ್ರಿಕೆಟಿಗರು 13ನೇ ಆವೃತ್ತಿಯ ಐಪಿಎಲ್ನಲ್ಲಿ ಪಾಲ್ಗೊಳ್ಳಲು ಯುಎಇಗೆ ಬಂದಿಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಶೆರ್ಫಾನ್ ರುದರ್ಫೋರ್ಡ್ ಹಾಗೂ ಕೀರನ್ ಪೊಲಾರ್ಡ್ ತಮ್ಮ ಕುಟುಂಬದವರೊಂದಿಗೆ ಅಬುಧಾಬಿಗೆ ಆಗಮಿಸಿದ ಫೋಟೋವನ್ನು ತನ್ನ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಆಲ್ರೌಂಡರ್ ಆ್ಯಂಡ್ರೆ ರಸೆಲ್, ಕ್ರಿಸ್ ಗ್ರೀನ್, ಸುನಿಲ್ ನರೈನ್ ಹಾಗೂ ಕೋಚ್ ಬ್ರೆಂಡನ್ ಮೆಕಲಮ್ ವಿಮಾನ ನಿಲ್ದಾಣದಿಂದ ಆಗಮಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ.
ಪ್ರೋಟೋಕಾಲ್ ಪ್ರಕಾರ ಈ ಎಲ್ಲಾ ಆಟಗಾರರು ಹೋಟೆಲ್ನಲ್ಲಿ 6 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಿದೆ. ಈ ವೇಳೆ ಮೂರು ಬಾರಿ ಕೋವಿಡ್ 19 ಟೆಸ್ಟ್ಗಳಿಗೆ ಒಳಗಾಗಬೇಕಿದ್ದು, ನೆಗೆಟಿವ್ ಬಂದ ನಂತರವಷ್ಟೇ ತಂಡಗಳೊಂದಿಗೆ ಸೇರಿಕೊಳ್ಳಲಿದ್ದಾರೆ.
ಸೆಪ್ಟೆಂಬರ್ 19ರಿಂದ 2020ರ ಆವೃತ್ತಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯುತ್ತಿವೆ.