ದುಬೈ: ಯುಎಇನಲ್ಲಿ ನಡೆಯುತ್ತಿರುವ 13ನೇ ಐಪಿಎಲ್ನಲ್ಲಿ ವೇಗಿಗಳಿಗಿಂತ ಹೆಚ್ಚು ಸ್ಪಿನ್ನರ್ಗಳಿಗೆ ನೆರವಾಗುತ್ತದೆ ಎಂಬ ಮಾತು ಐಪಿಎಲ್ ಆರಂಭಕ್ಕಿಂತಲೂ ಮೊದಲೇ ಕೇಳಿಬರುತ್ತಿತ್ತು. ಇದೀಗ ಆ ಮಾತು ನಿಜವಾಗುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಅಂಕಿ ಅಂಶಗಳನ್ನು ಅವಲೋಕಿಸಿದರೆ ಲೀಗ್ನಲ್ಲಿ ಸಾರ್ವಕಾಲಿಕ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿರುವ ಮೂವರಲ್ಲಿ ಇಬ್ಬರು ಲೆಗ್ ಸ್ಪಿನ್ನರ್ಗಳು ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಟಿ 20 ಫಾರ್ಮ್ಯಾಟ್, ಅದರಲ್ಲೂ ನಿರ್ದಿಷ್ಟವಾಗಿ ಐಪಿಎಲ್ನಲ್ಲಿ ಲೆಗ್ಗಿಗಳು ಹೆಚ್ಚು ವಿಶ್ವಾಸಾರ್ಹ ಬೌಲರ್ಗಳು ಎಂಬುದು ಕುತೂಹಲಕಾರಿ ಸಂಗತಿ.
ಪ್ರಸ್ತುತ ಐಪಿಎಲ್ನಲ್ಲಿ ನೋಡುವುದಾದರೆ ಲೆಗ್ ಸ್ಪಿನ್ನರ್ಗಳು ಆರಂಭದಲ್ಲೇ ಟ್ರೆಂಡ್ ಸೆಟ್ ಮಾಡುವ ಮೂಲಕ ಅವರ ಮೇಲಿರುವ ನಿರೀಕ್ಷೆಗಳನ್ನು ಹುಸಿಗೊಳಿಸಿಲ್ಲ. ಟೂರ್ನಿಯಲ್ಲಿ ಆರ್ಸಿಬಿ ತಂಡದ ಚಹಾಲ್ ಸೋಮವಾರ ಡೆಲ್ಲಿ ಪಂದ್ಯವನ್ನು ಹೊರತುಪಡಿಸಿದರೆ, ಆಡಿರುವ 5 ಪಂದ್ಯಗಳಲ್ಲೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ರಬಾಡ ನಂತರದಲ್ಲಿ ಸ್ಥಾನ ಪಡೆದಿದ್ದಾರೆ.
ಮುಂಬೈ ತಂಡದ ರಾಹುಲ್ ಚಹಾರ್ ಆಡಿರುವ 5 ಪಂದ್ಯಗಳಲ್ಲಿ 6 ವಿಕೆಟ್, ಸಿಎಸ್ಕೆ ತಂಡದ ಪಿಯೂಷ್ ಚಾವ್ಲಾ 5 ಪಂದ್ಯಗಳಿಂದ 6 ವಿಕೆಟ್, ಹೈದರಾಬಾದ್ ತಂಡದ ರಶೀದ್ ಖಾನ್ 5 ಪಂದ್ಯಗಳಲ್ಲಿ 5 ವಿಕೆಟ್, ಪಂಜಾಬ್ ತಂಡದ ಯುವ ಬೌಲರ್ ಮುರುಗನ್ ಅಶ್ವಿನ್ 2 ಪಂದ್ಯಗಳಲ್ಲಿ 4 ವಿಕೆಟ್, ರಾಜಸ್ಥಾನ್ ತಂಡದ ತೆವಾಟಿಯಾ 4 ಪಂದ್ಯಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಹೆಚ್ಚು ವಿಕೆಟ್ ಪಡೆದಿರುವ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಲೆಗ್ ಸ್ಪಿನ್ನರ್ ರಾಹುಲ್ ತೆವಾಟಿಯಾ ಹಾಗೂ ಚಾವ್ಲಾ ಹೊರತುಡಪಡಿಸಿದರೆ ಉಳಿದೆಲ್ಲಾ ಬೌಲರ್ಗಳು 8 ರ ಎಕಾನಮಿ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆವೃತ್ತಿ ಮುಂದುವರಿದಂತೆ ಚಿಕ್ಕ ಮೈದಾನವನ್ನು ಹೊಂದಿರುವ ಶಾರ್ಜಾ ಹೊರತುಪಡಿಸಿ ಉಳಿದೆರಡು ಕ್ರೀಡಾಂಗಣದಲ್ಲಿ ಲೆಗ್ ಸ್ಪಿನ್ನರ್ಗಳು ಮತ್ತಷ್ಟು ಕಾರ್ಯರೂಪಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ ಆರ್ಸಿಬಿ ಮತ್ತು ಭಾರತ ತಂಡದ ಸ್ಟಾರ್ ಸ್ಪಿನ್ನರ್ ಅಭಿಪ್ರಾಯದಂತೆ, ಚಿನ್ನಸ್ವಾಮಿಯಲ್ಲಿ ನಾವು ಟೂರ್ನಿಯ 7 ಪಂದ್ಯಗಳನ್ನಾಡುತ್ತಿದ್ದೆವು. ಆದರೆ ಚಿಕ್ಕ ಕ್ರೀಡಾಂಗಣವಾದ ಶಾರ್ಜಾದಲ್ಲಿ ಕೇವಲ ಮೂರು ಪಂದ್ಯಗಳನ್ನಾಡಲಿದ್ದೇವೆ. ಶಾರ್ಜಾದಲ್ಲಿ ಬೌಂಡರಿ- ಸಿಕ್ಸರ್ಗಳು ಹೆಚ್ಚು ಹೋಗಬಹುದು ಎಂದಿರುವ ಅವರು, ವಿಕೆಟ್ ಹೆಚ್ಚು ತಿರುಗಿದರೆ ನಿಮ್ಮನ್ನು ನಿಯಂತ್ರಿಸಲು ತುಂಬಾ ಕಷ್ಟ ಎಂದಿದ್ದಾರೆ.
ಆದರೆ ಉಳಿದ ಎರಡು (ಅಬುದಾಬಿ ಮತ್ತು ದುಬೈ) ಕ್ರೀಡಾಂಗಣದಲ್ಲಿ ದೊಡ್ಡ ಬೌಂಡರಿಗಳಿರುವುದರಿಂದ ಕೆಲವೊಮ್ಮೆ ಶಾರ್ಟ್ ಬಾಲ್ಗಳಿಗೂ ನೀವು ವಿಕೆಟ್ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.