ದುಬೈ:ಆರ್ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ 13ನೇ ಆವೃತ್ತಿಯ ಐಪಿಎಲ್ನಿಂದ ಹೊರ ಬರಲು ನಿರ್ಧರಿಸಿದ್ದಾರೆ. ಅವರ ಜಾಗಕ್ಕೆ ಆಸ್ಟ್ರೇಲಿಯಾದವರೇ ಆದ ಸ್ಪಿನ್ನರ್ ಆ್ಯಡಂ ಜಂಪಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವುದಾಗಿ ಆರ್ಸಿಬಿ ಘೋಷಿಸಿದೆ.
ವಿಶ್ವದ ಶ್ರೀಮಂತ ಲೀಗ್ ಆಗಿರುವ ಐಪಿಎಲ್ಗೆ ಇನ್ನು 19 ದಿನಗಳಿರುವಾಗ ಕೇನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿದು ಬಂದಿದೆ.
2020ರ ಐಪಿಎಲ್ ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿದೆ. ದುಬೈ, ಅಬುಧಾಬಿ ಮತ್ತು ಶಾರ್ಜಾದ ಕ್ರೀಡಾಂಗಣಗಳಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ.
ಈ ಬಾರಿಯ ಐಪಿಎಲ್ನಲ್ಲಿ ಕೇನ್ರಂತಹ ಕೌಶಲ್ಯವುಳ್ಳ ಬೌಲರ್ ನಮ್ಮ ಜೊತೆ ಇರುವುದಿಲ್ಲ ಎಂಬುದಕ್ಕೆ ನಾವು ನಿರಾಶೆಗೊಂಡಿದ್ದೇವೆ. ಏಕೆಂದರೆ ಕೇನ್ ಮತ್ತು ನೈಕಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ನಾವು ಕೇನ್ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಕೇನ್ ತಮ್ಮ ಮೊದಲ ಮಗುವಿನ ಸಂದರ್ಭದಲ್ಲಿ ತಮ್ಮ ಪತ್ನಿಯ ಜೊತೆಯಲ್ಲಿರಬೇಕೆಂದು ಬಯಸುತ್ತಾರೆ ಎಂದು ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.
ಯುಎಇ ವಾತಾವರಣವನ್ನು ಗಮನಿಸಿ ಕೇನ್ ರಿಚರ್ಡ್ಸನ್ ಬದಲಿಗೆ ಆಸ್ಟ್ರೇಲಿಯಾದವರೇ ಅದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾರನ್ನು ಕರೆಸಿದ್ದೇವೆ. ಇಲ್ಲಿನ ವಾತಾವರಣ ಸ್ಪಿನ್ಗೆ ಅನುಕೂಲವಾದರೆ ಅವರು ಚಹಾಲ್ ಜೊತೆಗೆ ನಮಗೆ ಮತ್ತೊಂದು ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
ಜಂಪಾ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಆರ್ಸಿಬಿ ಸ್ಪಿನ್ ಬಲ ಮತ್ತಷ್ಟು ಬಲಿಷ್ಠವಾಗಿದೆ. ಈಗಾಗಲೆ ಚಹಾಲ್, ವಾಸಿಂಗ್ಟನ್ ಸುಂದರ್, ಪವನ್ ನೇಗಿ ತಂಡದಲ್ಲಿರುವ ಪ್ರಮುಖ ಸ್ಪಿನ್ನರ್ಗಳಾಗಿದ್ದಾರೆ. ಇವರಲ್ಲದೆ ಮೊಯಿನ್ ಅಲಿ, ಶಹ್ಬಾಜ್ ಅಹ್ಮದ್ ತಂಡದ ಹೆಚ್ಚುವರಿ ಸ್ಪಿನ್ನರ್ಗಳಾಗಿದ್ದಾರೆ. ಜಂಪಾ 2016ರ ಆವೃತ್ತಿಯಲ್ಲಿ ರೈಸಿಂಗ್ ಪುಣೆ ತಂಡದ ಪರ ಆಡಿದ್ದು, 11 ಪಂದ್ಯಗಳಿಂದ 19 ವಿಕೆಟ್ ಪಡೆದಿದ್ದರು.